ADVERTISEMENT

ಕುಂಭ ಮೇಳದಲ್ಲಿ ಭಾಗವಹಿಸಿದ್ದ 1,701 ಮಂದಿಗೆ ಕೋವಿಡ್‌ ಪಾಸಿಟಿವ್

ಏಜೆನ್ಸೀಸ್
Published 15 ಏಪ್ರಿಲ್ 2021, 12:16 IST
Last Updated 15 ಏಪ್ರಿಲ್ 2021, 12:16 IST
ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದ ಜನ ಸಮುಹ –ಪಿಟಿಐ ಚಿತ್ರ
ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದ ಜನ ಸಮುಹ –ಪಿಟಿಐ ಚಿತ್ರ    

ಡೆಹ್ರಾಡೂನ್/ಋಷಿಕೇಶ: ಏಪ್ರಿಲ್ 10ರಿಂದ 14ರವರೆಗೆ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಪಾಲ್ಗೊಂಡವರಲ್ಲಿ 1,700ಕ್ಕೂ ಹೆಚ್ಚು ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ.

ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿರುವ ಕುಂಭ ಮೇಳದ ಮೂಲಕ ಕೊರೊನಾ ಸೋಂಕು ಮತ್ತಷ್ಟು ವೇಗವಾಗಿ ಹರಡಿ, ಕೋವಿಡ್ ಪ್ರಕರಣಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

ಐದು ದಿನಗಳ ಕುಂಭಮೇಳದಲ್ಲಿ ಪಾಲ್ಗೊಂಡಿದ್ದವರ ಪೈಕಿ 2,36,751 ಮಂದಿಯನ್ನು ವೈದ್ಯಕೀಯ ಕಾರ್ಯಕರ್ತರು ಪರೀಕ್ಷೆಗೊಳಪಡಿಸಿದಾಗ ಅದರಲ್ಲಿ 1,701 ಮಂದಿಗೆ ಕೋವಿಡ್ ಇರುವುದು ದೃಢಪಟ್ಟಿದೆ.

ADVERTISEMENT

‘ಹರಿದ್ವಾರದಿಂದ ದೇವಪ್ರಯಾಗ್‌ವರೆಗೆ ವಿಸ್ತರಿಸಿದ ಕುಂಭಮೇಳದ ಅವಧಿಯಲ್ಲಿ ವಿವಿಧ ಭಕ್ತರು ಮತ್ತು ಸಾಧುಗಳ ಗುಂಪುಗಳನ್ನು ಆರ್‌ಟಿ–ಪಿಸಿಆರ್ ಮತ್ತು ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆರ್‌ಟಿ–ಪಿಸಿಆರ್ ಪರೀಕ್ಷೆಯ ವರದಿಗಳು ಇನ್ನೂ ಬಂದಿಲ್ಲ. ಸೋಂಕಿತರ ಸಂಖ್ಯೆ 2 ಸಾವಿರಕ್ಕೆ ಏರುವ ಸಾಧ್ಯತೆ ಇದೆ’ ಎಂದು ಹರಿದ್ವಾರದ ಮುಖ್ಯ ವೈದ್ಯಾಧಿಕಾರಿ ಶಂಭಕುಮಾರ್ ಝಾ ಮಾಹಿತಿ ನೀಡಿದ್ದಾರೆ.

ಏ. 12 ಮತ್ತು ಏ. 14ರಂದು ನಡೆದ ಪುಣ್ಯಸ್ನಾನದಲ್ಲಿ ಸುಮಾರು 48.51 ಲಕ್ಷ ಭಕ್ತರು ಪಾಲ್ಗೊಂಡಿದ್ದರು. ಈ ಎರಡೂ ದಿನಗಳಲ್ಲಿ ಭಕ್ತರು ಕೋವಿಡ್‌ನ ಮಾರ್ಗಸೂಚಿಗಳಾದ ಮುಖಗವಸು ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.