ಸಜ್ಜನ್ ಕುಮಾರ್
ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ 1984ರಲ್ಲಿ ನಡೆದ ಸಿಖ್ ದಂಗೆ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ದೋಷಿ ಎಂದು ದೆಹಲಿಯ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ
ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಬುಧವಾರ ತೀರ್ಪು ಪ್ರಕಟಿಸಿದರು. ಫೆಬ್ರವರಿ 18ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವ ಸಾಧ್ಯತೆ ಇದೆ.
79 ವರ್ಷದ ಸಜ್ಜನ್ ಕುಮಾರ್ ಅವರನ್ನು ಸದ್ಯ ತಿಹಾರ್ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿದೆ.
ಸಿಖ್ ವಿರೋಧಿ ದಂಗೆಯಲ್ಲಿ ಸರಸ್ವತಿ ವಿಹಾರ್ ಬಳಿ ಜಸ್ವಂತ್ ಸಿಂಗ್ ಹಾಗೂ ಅವರ ಪುತ್ರ ತರುಣ್‌ದೀಪ್ ಸಿಂಗ್ ಅವರನ್ನು 1984ರ ನ. 1ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಪ್ರಮುಖ ಆರೋಪಿಯಾಗಿದ್ದರು.
‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ಸಿಖ್ಖರನ್ನೇ ಗುರಿಯಾಗಿಸಿಕೊಂಡು ಮಾರಕಾಸ್ತ್ರಗಳನ್ನು ಹಿಡಿದ ದೊಡ್ಡ ಗುಂಪು ಲೂಟಿ, ದಂಗೆ ಮತ್ತು ಬೆಂಕಿ ಹಚ್ಚಿ ಸಿಖ್ ಸಮುದಾಯಕ್ಕೆ ಸೇರಿದವರ ಆಸ್ತಿಯನ್ನು ನಾಶಪಡಿಸಿತ್ತು. ಆಗ ಜಸ್ವಂತ್ ಸಿಂಗ್ ಅವರ ಮನೆಗೆ ನುಗ್ಗಿದ ಗುಂಪು, ಅವರನ್ನು ಹಾಗೂ ಮಗನನ್ನು ಹತ್ಯೆಗೈದು, ಮನೆಯನ್ನು ಲೂಟಿ ಮಾಡಿತು’ ಎಂದು ದೂರ ನೀಡಿದ ಜಸ್ವಂತ್ ಅವರ ಪತ್ನಿ ಸಾಕ್ಷಿ ನುಡಿದಿರುವುದಾಗಿ ಪ್ರಾಸಿಕ್ಯೂಷನ್ ಅವರು ಆರೋಪಪಟ್ಟಿಯಲ್ಲಿ ಹೇಳಿದ್ದಾರೆ.
ಪಂಜಾಬಿ ಬಾಗ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. 2021ರ ಡಿ. 16ರಂದು ಸಜ್ಜನ್ ಕುಮಾರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.