ADVERTISEMENT

ಊಟ ಕೊಡದೆ ಹಿಂಸೆ: ಸೌದಿ ಉದ್ಯೋಗದಾತನ ಕ್ರೌರ್ಯ ಬಿಚ್ಚಿಟ್ಟ ರಾಜಸ್ಥಾನಿ ಕಾರ್ಮಿಕರು

ಪಿಟಿಐ
Published 24 ಜೂನ್ 2021, 12:33 IST
Last Updated 24 ಜೂನ್ 2021, 12:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಟ(ರಾಜಸ್ಥಾನ): ತಮ್ಮ ಕೆಲಸದ ಒಪ್ಪಂದದ ಅವಧಿ ಮುಗಿದ ನಂತರವೂ ಸೌದಿ ಅರೇಬಿಯಾದ ಯಾನ್ಬು ನಗರದಲ್ಲಿ ತಮ್ಮ ಉದ್ಯೋಗದಾತರಿಂದ ಬಂಧನಕ್ಕೊಳಗಾಗಿದ್ದ ಇಬ್ಬರು ಭಾರತೀಯ ಕಾರ್ಮಿಕರು ಗುರುವಾರ ರಾಜಸ್ಥಾನಕ್ಕೆ ಮರಳಿದರು.

ಕೆಲಸದ ಒಪ್ಪಂದದ ಮೇರೆಗೆ ಬುಂಡಿ ಜಿಲ್ಲೆಯ ಗಫರ್ ಮೊಹಮ್ಮದ್ (49) ಮತ್ತು ಭರತ್‌ಪುರ ಜಿಲ್ಲೆಯ ವಿಶ್ರಮ್ ಜಾಧವ್ (46) ಮೂರು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಹೋಗಿದ್ದರು. 2020 ರ ನವೆಂಬರ್‌ ತಿಂಗಳಲ್ಲೇ ಒಪ್ಪಂದ ಮುಗಿದಿದ್ದರೂ ಮಾಲೀಕರು ಭಾರತಕ್ಕೆ ಮರಳಲು ಬಿಟ್ಟಿರಲಿಲ್ಲ.

ಮಂಗಳವಾರ ಸಂಜೆ ಇವರಿಬ್ಬರಿಗೆ ಜೈಪುರಕ್ಕೆ ಟಿಕೆಟ್ ಹಸ್ತಾಂತರಿಸಲಾಗಿದೆ ಎಂದು ಕಾಂಗ್ರೆಸ್‌ನ ಬುಂಡಿ ಜಿಲ್ಲಾ ಉಪಾಧ್ಯಕ್ಷ ಚಾರ್ಮೇಶ್ ಶರ್ಮಾ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.

ADVERTISEMENT

ಏಪ್ರಿಲ್ ಅಂತ್ಯದ ವೇಳೆಗೆ ಮನೆಗೆ ಮರಳಲು ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳ ಆಶ್ವಾಸನೆಯ ಹೊರತಾಗಿಯೂ, ಆಹಾರ ಕೊಡದೆ ಮೂರು ತಿಂಗಳು ಬಂಧಿಸಿಡಲಾಗಿತ್ತು ಎಂದು ಇಬ್ಬರೂ ಆರೋಪಿಸಿದರು.

ಅಲ್ಲಿದ್ದ ಇತರ ಕಾರ್ಮಿಕರು ಕರುಣೆಯಿಂದ ಕೊಟ್ಟ ಆಹಾರ ಸೇವಿಸಿ ಜೀವ ಉಳಿಸಿಕೊಂಡಿದ್ದಾಗಿ ಕಾರ್ಮಿಕರು ಹೇಳಿದ್ದಾರೆ.

‘ನಾವು ತಾಯ್ನಾಡಿಗೆ ಮರಳುತ್ತೇವೆ ಎಂದುಕೊಂಡಿರಲಿಲ್ಲ. ನಮ್ಮ ವಿರುದ್ಧ ಮಾಲೀಕರು ಅಮಾನವೀಯ ನಡವಳಿಕೆ ತೋರಿದ್ದಾರೆ.. ಸುಮಾರು 50 ಡಿಗ್ರಿ ಸೆಲ್ಸಿಯಸ್‌ನಲ್ಲಿ ವಿದ್ಯುತ್ ಇಲ್ಲದೆ ಹಗಲಿನ ವೇಳೆಯಲ್ಲಿ ತಗಡು ಶೆಡ್‌ಗಳಲ್ಲಿ ಇರಿಸಲಾಗಿತ್ತು.’ ಎಂದು ಮೊಹಮ್ಮದ್ ತಾಯ್ನಾಡಿಗೆ ಮರಳಿದ ನಂತರ ಪಿಟಿಐಗೆ ತಿಳಿಸಿದರು.

ಈ ವರ್ಷದ ಫೆಬ್ರವರಿಯಲ್ಲಿ ಇಬ್ಬರು ಸಂತ್ರಸ್ತರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಅಪ್‌ಲೋಡ್ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದರು ಎಂದು ಶರ್ಮಾ ಹೇಳಿದ್ದಾರೆ.

ಮಾರ್ಚ್ 20 ರಂದು ಶರ್ಮಾ ವಿದೇಶಾಂಗ ಸಚಿವಾಲಯಕ್ಕೆ ದೂರು ನೀಡಿದ್ದು, ಪಿಎಂಒ ಮತ್ತು ರಾಷ್ಟ್ರಪತಿ ಕಚೇರಿಗೆ ಪತ್ರ ಬರೆದು, ಈ ಇಬ್ಬರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು.

ಶರ್ಮಾ ಪ್ರಕಾರ, ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಅವರ ಸೆರೆಯ ವರದಿಗಳು ಹೊರಬಿದ್ದ ನಂತರ ಕಾರ್ಯಾಚರಣೆ ಆರಂಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.