ADVERTISEMENT

ಸೈಫ್ ಅಲಿ ಖಾನ್ ಮೇಲೆ ದಾಳಿ: ದುಷ್ಕರ್ಮಿಯ ಪತ್ತೆಗೆ 20 ತಂಡಗಳ ರಚನೆ –ಪೊಲೀಸ್

ಪಿಟಿಐ
Published 17 ಜನವರಿ 2025, 1:59 IST
Last Updated 17 ಜನವರಿ 2025, 1:59 IST
   

ಮುಂಬೈ: ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ ದುಷ್ಕರ್ಮಿಯನ್ನು ಪತ್ತೆ ಹಚ್ಚಲು 20 ತಂಡಗಳನ್ನು ರಚಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಬಾಂದ್ರಾದಲ್ಲಿರುವ ಸೈಫ್‌ ಅವರ ಮನೆಗೆ ಗುರುವಾರ ಮುಂಜಾನೆ ನುಗ್ಗಿದ್ದ ದುಷ್ಕರ್ಮಿಯೊಬ್ಬ ಹಲವು ಬಾರಿ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿರುವ ನಟನನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

'ಸದ್ಗುರು ಶರಣ್' ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಕಿಡಿಗೇಡಿ, ಅದೇ ವೇಳೆ ದಾಳಿ ನಡೆಸಿದ್ದು, ಬಳಿಕ ದೊಣ್ಣೆ ಹಾಗೂ ಹರಿತವಾದ ಆಯುಧದೊಂದಿಗೆ ಪರಾರಿಯಾಗುತ್ತಿರುವ ದೃಶ್ಯಗಳು ಕಟ್ಟಡದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಮುಂಜಾನೆ 2.33ಕ್ಕೆ ಸೆರೆಯಾಗಿರುವ ದೃಶ್ಯಗಳಲ್ಲಿ ಶಂಕಿತನ ಮುಖ ಸ್ಪಷ್ಟವಾಗಿ ಕಾಣುತ್ತಿದೆ. ಕಟ್ಟಡದ ಆರನೇ ಮಹಡಿಯಲ್ಲಿ ಮೆಟ್ಟಿಲುಗಳನ್ನು ಇಳಿದಿರುವ ಆತ ಕಂದು ಬಣ್ಣದ ಟಿ–ಶರ್ಟ್‌ ಮತ್ತು ಕೆಂಪು ಸ್ಕಾರ್ಫ್‌ ಹಾಕಿಕೊಂಡಿರುವುದು ಕಾಣುತ್ತದೆ.

ಸೈಫ್‌ ಅವರು ಕಟ್ಟಡದ 12ನೇ ಮಹಡಿಯಲ್ಲಿ ವಾಸವಾಗಿದ್ದಾರೆ. ದಾಳಿ ಸಂದರ್ಭದಲ್ಲಿ ಅವರಿಗಷ್ಟೇ ಅಲ್ಲದೆ, ಮನೆಯಲ್ಲಿದ್ದ 56 ವರ್ಷದ ಸ್ಟಾಫ್‌ ನರ್ಸ್‌ ಹಾಗೂ ಪ್ರಕರಣದ ಬಗ್ಗೆ ಸದ್ಯ ದೂರು ದಾಖಲಿಸಿರುವ ಮನೆಗೆಲಸದವನಿಗೂ ಗಾಯವಾಗಿದೆ.

ದೃಶ್ಯವಾವಳಿಗಳು ಹಾಗೂ ಇತರ ಸುಳಿವುಗಳನ್ನು ಆಧರಿಸಿ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳದಿಂದ ಪರಾರಿಯಾಗುವ ಮುನ್ನ ದಾಳಿಕೋರ ಬಟ್ಟೆ ಬದಲಿಸಿರಬಹುದು ಎಂದು ಶಂಕಿಸಲಾಗಿದೆ.

ನರ್ಸ್‌ ಎಲಿಯಾಮಾ ಫಿಲಿಪ್ಸ್‌, ಮನೆಗೆಲಸದವ ಹಾಗೂ ಕಟ್ಟಡದ ಕಾವಲುಗಾರನ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.