ADVERTISEMENT

Lok Sabha Election | ಗುವಾಹಟಿಯಲ್ಲಿ ಪೂರ್ವ– ಈಶಾನ್ಯ ರಾಜ್ಯಗಳ ಬಿಜೆಪಿ ನಾಯಕರ ಸಭೆ

ಪಿಟಿಐ
Published 6 ಜುಲೈ 2023, 6:01 IST
Last Updated 6 ಜುಲೈ 2023, 6:01 IST
 ಬಿಜೆಪಿ ಬಾವುಟ (ಪ್ರಾತಿನಿಧಿಕ ಚಿತ್ರ)
ಬಿಜೆಪಿ ಬಾವುಟ (ಪ್ರಾತಿನಿಧಿಕ ಚಿತ್ರ)   

ಗುವಾಹಟಿ: 2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ಹೆಣೆಯಲು ಬಿಜೆಪಿ ಸಜ್ಜಾಗಿದ್ದು, ಪೂರ್ವ ಮತ್ತು ಈಶಾನ್ಯ ಭಾರತದ 12 ರಾಜ್ಯಗಳ ಹಿರಿಯ ನಾಯಕರು ಇಂದು ಅಸ್ಸಾಂ ಗುವಾಹಟಿಯಲ್ಲಿ ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್‌ ಸಹಾ ಸೇರಿದಂತೆ ಪಕ್ಷದ ಸಂಸದರು, ಶಾಸಕರು, ರಾಜ್ಯ ಘಟಕದ ಅಧ್ಯಕ್ಷರು ಭಾಗವಹಿಸಲಿದ್ದಾರೆ.

‘ಪಕ್ಷದ ಕೋರ್ ಕಮಿಟಿಯ ಸಭೆ ಬುಧವಾರ ರಾತ್ರಿ ನಡೆದಿದ್ದು, ಈ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ‘ಮಹಾ ಜನ ಸಂಪರ್ಕ ಅಭಿಯಾನ‘ ದ ಪರಿಣಾಮಗಳ ಕುರಿತು ಚರ್ಚಿಸಲಾಯಿತು. ರಾತ್ರಿ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಇಂದು ವಿವರವಾಗಿ ಚರ್ಚಿಸಲಾಗುವುದು‘ ಎಂದು ಅಸ್ಸಾಂ ಬಿಜೆಪಿ ಅಧ್ಯಕ್ಷ ಭಬೇಶ್ ಕಲಿತಾ ತಿಳಿಸಿದ್ದಾರೆ.

ADVERTISEMENT

ಈ ವರ್ಷದ ಕೊನೆಯಲ್ಲಿ ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಎಂಟು ಈಶಾನ್ಯ ರಾಜ್ಯಗಳು ಒಟ್ಟು 25 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಅಸ್ಸಾಂ14 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ ಮತ್ತು ತ್ರಿಪುರಾ ತಲಾ 2 ಸ್ಥಾನಗಳನ್ನು ಹೊಂದಿದ್ದರೆ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ತಲಾ 1 ಸ್ಥಾನವನ್ನು ಹೊಂದಿವೆ.

ಪೂರ್ವ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಪಶ್ಚಿಮ ಬಂಗಾಳ 42, ಬಿಹಾರ 40, ಒಡಿಶಾ 21 ಮತ್ತು ಜಾರ್ಖಂಡ್‌ 14 ಸ್ಥಾನಗಳನ್ನು ಹೊಂದಿವೆ.

ಉತ್ತರ , ಮಧ್ಯ ಮತ್ತು ಪಶ್ಚಿಮ ರಾಜ್ಯಗಳ ಬಿಜೆಪಿ ನಾಯಕರು ಜುಲೈ 7 ರಂದು ನವದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ. ಜುಲೈ 8 ರಂದು ದಕ್ಷಿಣ ರಾಜ್ಯಗಳ ಬಿಜೆಪಿ ನಾಯಕರು ಹೈದರಾಬಾದ್‌ನಲ್ಲಿ ಸಭೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.