ADVERTISEMENT

ಜಮ್ಮು ಮತ್ತು ಕಾಶ್ಮೀರ: ವರ್ಷದಲ್ಲಿ 225 ಉಗ್ರರ ಹತ್ಯೆ

16 ಪೊಲೀಸರು ಸೇರಿದಂತೆ 60 ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 11:45 IST
Last Updated 1 ಜನವರಿ 2021, 11:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 2020ರಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವಿವಿಧ ಉಗ್ರ ಸಂಘಟನೆಗಳ ಕಮಾಂಡರ್‌ಗಳು ಸೇರಿದಂತೆ 225 ಉಗ್ರರು ಹತ್ಯೆಯಾಗಿದ್ದು, 16 ಪೊಲೀಸರು ಸೇರಿದಂತೆ 60 ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಉಗ್ರರ ದಾಳಿ ಹಾಗೂ ಭದ್ರತಾ ಪಡೆಗಳ ಕಾರ್ಯಾಚರಣೆ ಸಂದರ್ಭದಲ್ಲಿ 38 ನಾಗರಿಕರೂ ಇದೇ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದುಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್‌ ಸಿಂಗ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬಹುತೇಕ ಎಲ್ಲ ಉಗ್ರ ಸಂಘಟನೆಗಳ ಕಮಾಂಡರ್‌ಗಳನ್ನು ನಾವು ಹೊಡೆದುರುಳಿಸಿದ್ದೇವೆ. ಉಳಿದಿರುವ ಕಮಾಂಡರ್‌ಗಳ ಚಟುವಟಿಕೆಗಳ ಬಗ್ಗೆಯೂ ನಮಗೆ ಮಾಹಿತಿ ದೊರೆಯುತ್ತಿದ್ದು, ಅವರನ್ನೂ ಭದ್ರತಾ ಪಡೆಗಳು ಶೀಘ್ರದಲ್ಲೇ ಮಟ್ಟ ಹಾಕಲಿದೆ. ಜಮ್ಮುವಿನಲ್ಲಿ 13 ಹಾಗೂ ಕಾಶ್ಮೀರದಲ್ಲಿ 90 ಸೇರಿದಂತೆ ಒಟ್ಟು 103 ಕಾರ್ಯಾಚರಣೆಗಳನ್ನು ನಾವು ನಡೆಸಿದ್ದು, ಕಾಶ್ಮೀರದಲ್ಲಿ 207 ಹಾಗೂ ಜಮ್ಮುವಿನಲ್ಲಿ 18 ಉಗ್ರರ ಹತ್ಯೆಯಾಗಿದೆ’ ಎಂದರು.

ADVERTISEMENT

‘ಈ ವರ್ಷ ಉಗ್ರ ಸಂಘಟನೆಗಳನ್ನು ಸೇರಿದ್ದವರ ಪೈಕಿ 76 ಉಗ್ರರನ್ನು ಹೊಡೆದುರುಳಿಸಿದ್ದೇವೆ, 46 ಉಗ್ರರನ್ನು ಬಂಧಿಸಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಉಗ್ರರ ಜೀವಿತಾವಧಿ 3 ದಿನದಿಂದ ಕೇವಲ 3 ತಿಂಗಳು ಮಾತ್ರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.