ಮಮತಾ ಬ್ಯಾನರ್ಜಿ
(ಪಿಟಿಐ ಚಿತ್ರ)
ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬರೆದ ಮೂರು ಪುಸ್ತಕಗಳನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.
48ನೇ ಅಂತರರಾಷ್ಟ್ರೀಯ ಕೋಲ್ಕತ್ತ ಪುಸ್ತಕ ಮೇಳದಲ್ಲಿ ಬ್ಯಾನರ್ಜಿ ಅವರ ಸುದೀರ್ಘ ರಾಜಕೀಯ ಅನುಭವಗಳನ್ನು ಒಳಗೊಂಡ ಮೂರು ಪುಸ್ತಕಗಳನ್ನು ಡೇಸ್ ಪಬ್ಲಿಷಿಂಗ್ ಹೊರತಂದಿದೆ.
ಮಮತಾ ಬರೆದ ಮೂರು ಹೊಸ ಪುಸ್ತಕಗಳ ಪೈಕಿ 'ಲಿಪಿಬೊಡ್ಡೋ ಕಿಚು ಕಾಜ್' (Lipiboddo Kichu Kaaj) ಹೆಚ್ಚು ಮಾರಾಟವಾದ ಪುಸ್ತಕವಾಗಿದೆ. ಈ ಪುಸ್ತಕವು ಬ್ಯಾನರ್ಜಿ ಅವರು ರೈಲ್ವೆ ಸಚಿವೆಯಾಗಿದ್ದಾಗ ಹಾಗೂ ಮುಖ್ಯಮಂತ್ರಿಯಾದ ಬಳಿಕ ಎದುರಾದ ರಾಜಕೀಯ ಸನ್ನಿವೇಶಗಳ ಕುರಿತಾಗಿದೆ.
'ಬಂಗ್ಲಾರ್ ನಿರ್ಬಚೋಂ ಓ ಅಮ್ರಾ' (ನಾವು ಮತ್ತು ಬಂಗಾಳದ ಚುನಾವಣೆಗಳು) ಈ ಪುಸ್ತಕದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಚುನಾವಣೆ ಸಂದರ್ಭದಲ್ಲಿ ಎದುರಿಸಿದ ಸವಾಲುಗಳ ಬಗೆಗಿನ ಘಟನೆಗಳನ್ನು ವಿವರಿಸಲಾಗಿದೆ.
ಮತ್ತೊಂದು ಪುಸ್ತಕ ‘ಸೆಲ್ಯೂಟ್ 2‘ನಲ್ಲಿ ಬ್ಯಾನರ್ಜಿ ಅವರು ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕವಿತೆಗಳನ್ನು ರಚಿಸುವ ಮೂಲಕ ಸುಮಾರು 50 ಗಣ್ಯ ವ್ಯಕ್ತಿಗಳಿಗೆ ಗೌರವ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
'ನನಗೆ ಸಾಹಿತ್ಯ ಮತ್ತು ಬರವಣಿಗೆ ಎಂದರೆ ಬಹಳ ಪ್ರೀತಿ. ಕೆಲಸದ ನಡುವೆಯೂ ನಾನು ನನ್ನ ಆಲೋಚನೆಗಳನ್ನು ಬರಹ ರೂಪಕ್ಕೆ ತರುತ್ತೇನೆ ಉಳಿದದ್ದನ್ನು ಪ್ರಕಾಶಕರು ನೋಡಿಕೊಳ್ಳುತ್ತಾರೆ' ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬ್ಯಾನರ್ಜಿ ಹೇಳಿದ್ದರು.
ಬ್ಯಾನರ್ಜಿ ಅವರು ಈವರೆಗೂ ಸುಮಾರು 150ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.