ADVERTISEMENT

ಕಾರ್ಖಾನೆಯೊಂದರ ಛಾವಣಿ ಕುಸಿದು ಮೂವರು ಸಾವು, ಏಳು ಜನರಿಗೆ ಗಾಯ

ಪಿಟಿಐ
Published 5 ಏಪ್ರಿಲ್ 2021, 14:25 IST
Last Updated 5 ಏಪ್ರಿಲ್ 2021, 14:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲೂಧಿಯಾನ: ಇಲ್ಲಿನ ಬಾಬಾ ಮುಕಂದ್ ಸಿಂಗ್ ನಗರದಲ್ಲಿ ಸೋಮವಾರ ಕಾರ್ಖಾನೆಯೊಂದರ ಛಾವಣಿ ಕುಸಿದು ಮೂವರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಲವತ್ತು ಜನರನ್ನು ಅವರಲ್ಲಿ ಹೆಚ್ಚಾಗಿ ಕಾರ್ಮಿಕರನ್ನು ಅವಘಡದ ಸ್ಥಳದಿಂದ ರಕ್ಷಿಸಲಾಗಿದೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಅವಶೇಷಗಳ ಅಡಿಯಲ್ಲಿ ಹೆಚ್ಚಿನ ಜನರು ಎಲ್ಲಿ ಸಿಲುಕಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ನಗರಸಭೆಯ ಅನುಮತಿಯಿಲ್ಲದೇ ಕಾರ್ಖಾನೆ ಮಾಲೀಕರು ಕಟ್ಟಡವನ್ನು ಲಿಂಟಲ್ ಮಟ್ಟದವರೆಗೆ ಎತ್ತರಿಸಿದ್ದರು.' ಎಂದು ಜಿಲ್ಲಾಧಿಕಾರಿ ವರಿಂದರ್ ಶರ್ಮಾ ಹೇಳಿದ್ದಾರೆ.

ADVERTISEMENT

ಸ್ಥಳಕ್ಕೆ ಆಗಮಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಸ್ಥಳೀಯ ಸಂಸ್ಥೆಗಳ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ.

ಘಟನೆ ಬಳಿಕ ಓರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು. ಇನ್ನೊಬ್ಬರು ಅವಶೇಷಗಳ ರಾಶಿ ಕೆಳಗೆ ಶವವಾಗಿ ಪತ್ತೆಯಾಗಿದ್ದರೆ, ಮೂರನೇ ವ್ಯಕ್ತಿಯು ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಕಾರ್ಖಾನೆಯ ಮಾಲೀಕರು ಮತ್ತು ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲೂಧಿಯಾನ ಪೊಲೀಸ್ ಆಯುಕ್ತ ರಾಕೇಶ್ ಅಗರ್‌ವಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.