ADVERTISEMENT

ಹಳಿ ದಾಟುತ್ತಿದ್ದ ಕಾರಿಗೆ ರೈಲು ಡಿಕ್ಕಿ: ಒಂದೇ ಕುಟುಂಬದ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 2:43 IST
Last Updated 21 ಸೆಪ್ಟೆಂಬರ್ 2020, 2:43 IST
ಹಳಿ ದಾಟುತ್ತಿದ್ದ ಕಾರಿಗೆ ಗುದ್ದಿರುವ ರೈಲು (ಟ್ವಿಟರ್‌ ಚಿತ್ರ)
ಹಳಿ ದಾಟುತ್ತಿದ್ದ ಕಾರಿಗೆ ಗುದ್ದಿರುವ ರೈಲು (ಟ್ವಿಟರ್‌ ಚಿತ್ರ)   

ರಂಗ್ಯಾ: ಅಸ್ಸಾಂನ ಕಮ್ರೂಪ್ ಜಿಲ್ಲೆಯಲ್ಲಿ ಭಾನುವಾರ ರೈಲ್ವೆ ಹಳಿಗಳನ್ನು ದಾಟುತ್ತಿದ್ದ ಕಾರನ್ನು ವೇಗವಾಗಿ ಬಂದ ರೈಲು ಗುದ್ದಿಕೊಂಡು ಹೋಗಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಕಾಲೇಜು ಪ್ರಾದ್ಯಾಪಕ, ಅವರ ಪತ್ನಿ ಮತ್ತು ಪುತ್ರಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಈ ಘಟನೆ ನಡೆದಿದೆ. ಗರೋಯಿಮರಿ ಬಳಿಯ ಗುವಾಹಟಿ-ಜೋಗಿಗೋಪಾ ಮಾರ್ಗದಲ್ಲಿ ಬೊಂಗೈಗಾಂವ್‌ಗೆ ತೆರಳುತ್ತಿದ್ದ ರೈಲಿಗೆ ಸಿಲುಕಿ ಕುಟುಂಬ ಧಾರುಣ ಅಂತ್ಯ ಕಂಡಿದೆ. ಮೃತರನ್ನು ಫಕ್ರುದ್ದೀನ್ ಅಲಿ ಅಹ್ಮದ್ ಕಾಲೇಜಿನ ಅಸ್ಸಾಮೀಸ್ ವಿಭಾಗದ ಅಧ್ಯಾಪಕ ಅಬ್ದುಲ್ ಜಲೀಲ್, ಅವರ ಪತ್ನಿ ಸಾನಿಯಾರಾ ಬೇಗಂ ಮತ್ತು 12 ವರ್ಷದ ಮಗಳು ಅಫ್ರಿನ್ ಅಖ್ತರ್ ಎಂದು ಗುರುತಿಸಲಾಗಿದೆ.

‘ಪ್ರಾದ್ಯಾಪಕ ಅಬ್ದುಲ್ ಜಲೀಲ್ ಅವರ ನಾಲ್ಕು ವರ್ಷದ ಕಿರಿಯ ಮಗಳು ಘಟನೆಯಲ್ಲಿ ಪವಾಡಸದೃಶವಾಗಿ ಪಾರಾಗಿದ್ದಾಳಾದರೂ, ಗಾಯಗೊಂಡಿದ್ದಾಳೆ. ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ರೈಲು ಮಾರ್ಗದ ಕೆಳಗಿನ ಅಂಡರ್‌ಪಾಸ್‌ ಬಳಸದೇ, ಹಳಿಗಳ ಮೂಲಕವೇ ರಸ್ತೆ ದಾಟಲು ಯತ್ನಿಸಿದ್ದೇ ಈ ದುರ್ಘಟನೆಗೆ ಕಾರಣವಾಗಿದೆ. ಆದರೆ, ಕಳೆದ ಹಲವು ದಿನಗಳಿಂದ ಮಳೆಯಿಂದಾಗಿ ಆಳೆತ್ತರಕ್ಕೆ ನೀರು ನಿಂತಿದ್ದರಿಂದ ಅಂಡರ್‌ಪಾಸ್‌ ಬಳಸಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.

ಅಪಘಾತದಿಂದ ಆಕ್ರೋಶಗೊಂಡ ಸ್ಥಳೀಯರು ರೈಲ್ವೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.