ADVERTISEMENT

'ಜೈ ಶ್ರೀರಾಮ್' ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಿದೆ: ಮೋದಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 14:02 IST
Last Updated 24 ಜುಲೈ 2019, 14:02 IST
   

ನವದೆಹಲಿ: ದೇಶದಲ್ಲಿ ಧಾರ್ಮಿಕ ದ್ವೇಷ ಮತ್ತು ಗುಂಪು ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕವ್ಯಕ್ತಪಡಿಸಿ ಖ್ಯಾತ ಸಿನಿಮಾ ನಿರ್ದೇಶಕರು, ನಟರು ಸೇರಿದಂತೆ 49 ಸೆಲೆಬ್ರಿಟಿಗಳು ಸಹಿ ಹಾಕಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಜೈ ಶ್ರೀರಾಮ್ ಎಂಬುದು ಈಗ ಯುದ್ಧದ ಕೂಗು ಆಗಿಬಿಟ್ಟಿದೆ.ರಾಮ ಎಂಬುದು ಅಲ್ಪ ಸಂಖ್ಯಾತರಲ್ಲಿ ನಡುಕ ಹುಟ್ಟಿಸಿದೆ.ರಾಮನ ಹೆಸರಲ್ಲಿ ದೂಷಣೆ ಮಾಡುವುದನ್ನು ನಿಲ್ಲಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ.

ಅಡೂರ್ ಗೋಪಾಲಕೃಷ್ಣನ್, ಮಣಿ ರತ್ನಂ, ಅನುರಾಗ್ ಕಶ್ಯಪ್, ಅಪರ್ಣಾ ಸೇನ್, ಕೊಂಕಣಾ ಸೇನ್ ಶರ್ಮಾ ,ಸೌಮಿತ್ರಾ ಚಟರ್ಜಿ, ಬಿನಾಯಕ್ ಸೇನ್, ರೇವತಿ, ಶ್ಯಾಮ್ ಬೆನಗಲ್, ಶುಭಾ ಮುದ್‌ಗಲ್, ರೂಪಂ ಇಸ್ಲಾಮ್ , ಅನುಪಮ್ ರಾಯ್, ಪರಂಬ್ರತಾ, ರಿದ್ಧಿ ಸೇನ್, ಇತಿಹಾಸ ತಜ್ಞ ರಾಮಚಂದ್ರ ಗುಹಾ, ವೈದ್ಯ ಮತ್ತು ಸಾಮಾಜಿಕ ಕಾರ್ಯಕರ್ತ ಬಿನಾಯಕ್ ಸೇನ್, ಆಶಿಶ್ ನಂದಿ ಸೇರಿದಂತೆ 49 ಸೆಲೆಬ್ರಿಟಿಗಳ ಸಹಿ ಈ ಪತ್ರದಲ್ಲಿದೆ. ಜುಲೈ 23ರಂದು ಕಳಿಸಿದ ಪತ್ರ ಇದಾಗಿದೆ.

ADVERTISEMENT

ದೇಶದಲ್ಲಿ ನಡೆದ ಗುಂಪು ಹಲ್ಲೆ ಪ್ರಕರಣಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದು, ಮುಸ್ಲಿಂ, ದಲಿತ ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಗುಂಪು ಹಲ್ಲೆಗಳನ್ನು ತಕ್ಷಣವೇ ನಿಲ್ಲಿಸಬೇಕು.ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ(ಎನ್‌ಸಿಆರ್‌ಬಿ) ಪ್ರಕಾರ 2016ರಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಸಂಖ್ಯೆ 840. ಆದರೆ ಇದರಲ್ಲಿ ಶಿಕ್ಷೆಯಾದವರ ಸಂಖ್ಯೆ ಕಡಿಮೆಯೇ.

ಮಾನ್ಯ ಪ್ರಧಾನಿಯವರೇ, ನೀವು ಸಂಸತ್ತಿನಲ್ಲಿ ಗುಂಪು ಹಲ್ಲೆ ವಿಷಯದ ಬಗ್ಗೆ ಖಂಡನೆ ವ್ಯಕ್ತಪಡಿಸಿದಿರಿ.ಆದರೆ ಇದು ಸಾಲದು.ಈ ರೀತಿ ಕೃತ್ಯವೆಸಗಿದವರ ಬಗ್ಗೆ ನೀವು ಯಾವ ಕ್ರಮ ಕೈಗೊಂಡಿದ್ದೀರಿ? ದುರದೃಷ್ಟವಶಾತ್ ಜೈ ಶ್ರೀರಾಂ ಎಂಬುದು ಇಂದು ಯುದ್ಧದ ಕೂಗು ಆಗಿ ಬಿಟ್ಟಿದ್ದುಇದಕ್ಕೆ ಕಾನೂನಿನಹಂಗಿಲ್ಲದಂತಾಗಿದೆ.ಈ ಹೆಸರಿನಿಂದಲೇ ಹಲವಾರು ಗುಂಪು ಹಲ್ಲೆಗಳು ನಡೆದಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಇರಲೇ ಬೇಕು. ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯ ಇರುವವರನ್ನು ದೇಶದ್ರೋಹಿ ಅಥವಾ ನಗರ ನಕ್ಸಲ್ (ಅರ್ಬನ್ ನಕ್ಸಲ್) ಎಂದು ಮುದ್ರೆಯೊತ್ತಬಾರದು ಎಂದು ಪತ್ರದಲ್ಲಿ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.