ADVERTISEMENT

ಕಡಪ: ತಮಿಳುನಾಡಿನ ಶಂಕಿತ ರಕ್ತ ಚಂದನ ಕಳ್ಳಸಾಗಣೆದಾರರು ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 14:39 IST
Last Updated 2 ನವೆಂಬರ್ 2020, 14:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುಪತಿ: ಇಲ್ಲಿಂದ 150 ಕಿ.ಮೀ ದೂರದಲ್ಲಿರುವ ನೆರೆಯ ಕಡಪಾ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಮೂರು ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ತಮಿಳುನಾಡು ಮೂಲದ ಐವರು ಶಂಕಿತ ರಕ್ತ ಚಂದನ ಕಳ್ಳಸಾಗಣೆದಾರರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳಸಾಗಣೆದಾರರು ತೆರಳುತ್ತಿದ್ದ ಎಸ್‌ಯುವಿ ವಾಹನವು ಎದುರಿನಿಂದ ಬರುತ್ತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಂಧನ ತುಂಬಿದ್ದ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಪಾ ಪಟ್ಟಣದ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್) ನಲ್ಲಿ ಚಿಕಿತ್ಸೆ ಫಲಿಸದೆ ಮತ್ತೊಂದು ಕಾರಿನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.

ADVERTISEMENT

ತೀವ್ರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಮತ್ತು ಗಾಯಗೊಂಡವರೆಲ್ಲರೂ ತಮಿಳುನಾಡಿನ ಸೇಲಂನ ಕಳ್ಳಸಾಗಾಣಿಕೆದಾರರು ಎನ್ನಲಾಗಿದ್ದು, ಅವರು ಭಕರಪೇಟೆ ಕಾಡುಗಳಿಂದ ರಕ್ತ ಚಂದನವನ್ನು ಸಾಗಿಸುತ್ತಿದ್ದರು. ಕಾರುಗಳಲ್ಲಿನ ಬೆಂಕಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ರಕ್ತ ಚಂದನದ ಹಲವಾರು ದಿಮ್ಮಿಗಳು ಸಹ ಸುಟ್ಟುಹೋಗಿವೆ.

ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಮತ್ತು ಎಸ್‌ಯುವಿ ಜಖಂಗೊಂಡಿದ್ದು, ಸದ್ಯ ತನಿಖೆ ಕೈಗೊಳ್ಳಲಾಗಿದೆ. ಮೃತರ ಮಾಹಿತಿ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.