ADVERTISEMENT

ದೇಶವನ್ನೇ ಬೆಚ್ಚಿ ಬೀಳಿಸಿದ ಹತ್ಯೆಗಳಿವು!

ಶ್ರದ್ಧಾ ಕೊಲೆಯೊಂದಿಗೆ ನೆನಪಾಗುವ ಅಪರಾಧಗಳು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2022, 11:32 IST
Last Updated 26 ನವೆಂಬರ್ 2022, 11:32 IST
   

ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲಕರ್‌ ಕೊಲೆ ಪ್ರಕರಣ ಸದ್ಯ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕೊಲೆ ಆರೋಪಿ ಆಫ್ತಾಬ್‌ ಅಮೀನ್‌ ಪೂನಾವಾಲಾ, ಮೆಹ್ರೌಲಿಯ ಫ್ಲ್ಯಾಟ್‌ನಲ್ಲಿ ಆತನೊಂದಿಗೆ ಸಹಜೀವನ ನಡೆಸುತ್ತಿದ್ದ ಪ್ರೇಯಸಿ ಶ್ರದ್ಧಾ ವಾಲಕರ್‌ಳನ್ನು ಹತ್ಯೆಗೈದು, ದೇಹವನ್ನು ಕತ್ತರಿಸಿ 35 ತುಂಡಗಳಾಗಿಸಿ ಬೇರೆ ಬೇರೆ ಜಾಗಗಳಲ್ಲಿ ಎಸೆದಿದ್ದಾನೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಸಾಕ್ಷ್ಯಗಳಿಗಾಗಿ ಪರದಾಡುತ್ತಿದ್ದಾರೆ. ಆದರೆ ಈ ರೀತಿ ಕ್ರೌರ್ಯ ಮೆರೆದ ಪ್ರಕರಣಗಳು ದೇಶದಲ್ಲಿ ಇದೇ ಮೊದಲೇನಲ್ಲ. ಧರ್ಮಾತೀತವಾಗಿ ನಮ್ಮ ದೇಶದಲ್ಲಿಯೂ ಇಂತಹ ದುಷ್ಕೃತ್ಯ ನಡೆದಿವೆ.

ಬೇಲಾರಾಣಿ ದತ್ತಾ ಕೊಲೆ ಪ್ರಕರಣ(1954):
1950 ರ ದಶಕವದು. ಕೋಲ್ಕತ್ತದಲ್ಲಿ, ಪೌರ ಕಾರ್ಮಿಕರೊಬ್ಬರು ಕಾಳಿಘಾಟ್ ಉದ್ಯಾನವನ ಸ್ವಚ್ಛಗೊಳಿಸುತ್ತಿರುವಾಗ ಪತ್ರಿಕೆಯೊಂದರಲ್ಲಿ ಸುತ್ತಿದ್ದ ಕತ್ತರಿಸಿದ ಕೈಯನ್ನು ಕಂಡು ಬೆಚ್ಚಿ ಬೀಳುತ್ತಾರೆ. ದೇಶದೆಲ್ಲೆಡೆ ಈ ಹತ್ಯೆ ಸದ್ದು ಮಾಡುತ್ತದೆ. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ನಗರದ ಹಲವೆಡೆ ಇದೇ ರೀತಿ ಪತ್ರಿಕೆಯಲ್ಲಿ ಸುತ್ತಿದ್ದ ದೇಹದ ವಿವಿಧ ಭಾಗಗಳು ಸಿಗುತ್ತವೆ. ತಲೆ ಬುರುಡೆಯೂ ಸಿಗುತ್ತದೆ. ಕೊಲೆಯಾದಾಕೆಯ ಮುಖವನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗುವುದಿಲ್ಲ. ಕಣ್ಣು, ಕಿವಿಗಳು ತಲೆಯಿಂದ ಹೊರಬಂದಿರುತ್ತವೆ. ಚರ್ಮ ಪೂರ್ತಿ ಸುಲಿದಿರುತ್ತದೆ.

ತಮ್ಮ ಬಳಿಯಿದ್ದ ಭೌತಿಕ ಸಾಕ್ಷ್ಯದೊಂದಿಗೆ ಮೃತ ಮಹಿಳೆಯ ಮುಖವನ್ನು ಹೋಲಿಕೆ ಮಾಡಲು ಪೊಲೀಸರು ಪ್ಲಾಸ್ಟಿಕ್ ಸರ್ಜನ್ ಅನ್ನು ಸಹ ತನಿಖಾ ತಂಡದಲ್ಲಿ ಸೇರಿಸಿಕೊಳ್ಳುತ್ತಾರೆ. ಮೃತ ಮಹಿಳೆಯ ರೇಖಾಚಿತ್ರವನ್ನು ರಚಿಸಿ, ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಇಷ್ಟಾಗಿಯೂ ಕೊಲೆಯ ಕುರಿತು ಪೊಲೀಸರಿಗೆ ಯಾವುದೇ ಸುಳಿವು ದೊರೆಯುವುದಿಲ್ಲ.

ADVERTISEMENT

ತನಿಖೆಯ ನೇತೃತ್ವ ವಹಿಸಿದ್ದ ಸಮರೇಂದ್ರ ನಾಥ್ ಘೋಷ್ ಅವರಿಗೆ ಆಕಸ್ಮಿಕವಾಗಿ ಕೊಲೆಗಾರ ಪತ್ತೆಯಾಗುತ್ತಾನೆ. ಖಾಲಿ ಬಿದ್ದಿದ್ದ ಔಷಧಾಲಯದ ಉದ್ಯೋಗಿಯೊಬ್ಬರು ತಮ್ಮ ಮಾಲೀಕರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳುತ್ತಾರೆ. ಅದನ್ನು ಈ ಕೊಲೆ ಪ್ರಕರಣಕ್ಕೆ ಸುಮ್ಮನೆ ಥಳಕು ಹಾಕಿಕೊಂಡು ಸಮರೇಂದ್ರ ನಾಥ್‌ ತನಿಖೆ ಪ್ರಾರಂಭಿಸುತ್ತಾರೆ. ಕಾಣೆಯಾದ ವ್ಯಕ್ತಿಯನ್ನು ಬಿರೇನ್ ದತ್ತಾ ಎಂದು ಗುರುತಿಸಿ ವಿಚಾರಣೆ ನಡೆಸುತ್ತಾರೆ. ಈ ವ್ಯಕ್ತಿ ಬೇಲಾರಾಣಿ ಮತ್ತು ಮೀರಾ ಎಂಬ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದ.

ಬೇಲಾರಾಣಿ ದತ್ತಾ ಗರ್ಭಿಣಿ ಎಂದು ಹೇಳಿದಾಗ, ಬಿರೇನ್ ಅವಳನ್ನು ಮತ್ತು ಮಗುವನ್ನು ಕೊಂದು ಅವಳ ಶವವನ್ನು ಕ್ರೂರವಾಗಿ ಕತ್ತರಿಸಿ ಕೋಲ್ಕತ್ತದಾದ್ಯಂತ ಎಸೆದು ತಲೆಮರೆಸಿಕೊಂಡಿದ್ದ. ನ್ಯಾಯಾಲಯದ ವಿಚಾರಣೆ ಬಳಿಕ ಪ್ರಕರಣದಲ್ಲಿ ಬಿರೇನ್‌ಗೆ ಗಲ್ಲುಶಿಕ್ಷೆಯಾಗುತ್ತದೆ.

ತಂದೂರ್‌ ಹತ್ಯೆ ಪ್ರಕರಣ(1995):
ಸುಶೀಲ್ ಶರ್ಮಾ ಮತ್ತು ಆತನ ಪತ್ನಿ ನೈನಾ ಸಾಹ್ನಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಕಾರ್ಯಕರ್ತರು. ಶರ್ಮಾ, ದೆಹಲಿ ಮಾಜಿ ಶಾಸಕ ಕೂಡ. ಕಾಂಗ್ರೆಸ್ ಸಹ ಕಾರ್ಯಕರ್ತ ಮತ್ಲೂಬ್ ಕರೀಮ್ ತನ್ನ ಬಾಲ್ಯದ ಸ್ನೇಹಿತ ಎಂದು ನೈನಾ ಬಹಿರಂಗಪಡಿಸುತ್ತಾಳೆ. ಇದರಿಂದ ಅಸೂಯೆಗೊಂಡ ಸುಶೀಲ್ ಪತ್ನಿಯೊಂದಿಗೆ ಜಗಳವಾಡುತ್ತಾನೆ. ಜುಲೈ 2, 1995 ರ ರಾತ್ರಿ, ಪತ್ನಿ ದೂರವಾಣಿಯಲ್ಲಿ ಕರೀಮ್‌ ಜೊತೆ ಮಾತನಾಡುತ್ತಿರುವುದನ್ನು ಗಮನಿಸುತ್ತಾನೆ. ಅದೇ ಕೋ‍ಪದಲ್ಲಿ ಪತ್ನಿಯನ್ನು ಕೊಲೆಗೈಯ್ಯುತ್ತಾನೆ.

ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನದಲ್ಲಿ ಸುಶೀಲ್ ತನ್ನ ಹೆಂಡತಿಯ ಶವವನ್ನು ತನ್ನ ಸ್ನೇಹಿತನ ‘ಬೈಗ್ಯಾ’ ಎಂಬ ರೆಸ್ಟೋರೆಂಟ್‌ಗೆ ಕೊಂಡೊಯ್ಯುತ್ತಾನೆ. ರೆಸ್ಟೊರೆಂಟ್‌ ನಿರ್ವಾಹಕ ಕೇಶವ್‌ ಶರ್ಮಾ ಎಂಬಾತ ಕೂಡ ಸುಶೀಲ್‌ಗೆ ಸಾಥ್‌ ನೀಡುತ್ತಾನೆ. ಇಬ್ಬರೂ ಸೇರಿ ಶವವನ್ನು ತಂದೂರಿ ಒಲೆಯಲ್ಲಿ ಸುಡಲು ಪ್ರಯತ್ನಿಸುತ್ತಾರೆ. ಇದನ್ನು ಮಾಧ್ಯಮಗಳು ತಂದೂರ್‌ ಹತ್ಯೆ ಎಂದು ಬಣ್ಣಿಸುತ್ತವೆ. ಸುದೀರ್ಘ ತನಿಖೆ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗುತ್ತಾರೆ. ಪ್ರಕರಣದಲ್ಲಿ ಸುಶೀಲ್‌ ಶರ್ಮಾಗೆ 29 ವರ್ಷ ಜೈಲು ಶಿಕ್ಷೆಯಾಗುತ್ತದೆ. ಕೇಶವ್‌ ಶರ್ಮಾಗೆ 7 ವರ್ಷ ಶಿಕ್ಷೆ ವಿಧಿಸಲಾಗುತ್ತದೆ.

ಹೇತಲ್ ಪಾರೇಖ್ ಹತ್ಯೆ(1990):
ಕೋಲ್ಕತ್ತದ 15 ವರ್ಷದ ಶಾಲಾ ಬಾಲಕಿ ಹೇತಲ್ ಪಾರೇಖ್‌ಳನ್ನು ಆಕೆಯ ಮನೆಯಲ್ಲಿಯೇ ಅತ್ಯಾಚಾರ ನಡೆಸಿ ಕ್ರೂರವಾಗಿ ಕೊಲೆಗೈಯ್ಯಲಾಗುತ್ತದೆ. ಪುಟ್ಟ ಬಾಲಕಿಯ ಅತ್ಯಾಚಾರ ಪ್ರಕರಣದಿಂದ ಇಡೀ ಕೋಲ್ಕತ್ತ ಬೆಚ್ಚಿಬೀಳುತ್ತದೆ. ಒಂದು ಮಧ್ಯಾಹ್ನ ಆಕೆಯ ತಾಯಿ ದೇವಸ್ಥಾನಕ್ಕೆ ಹೋದಾಗ, ಅದೇ ಕಟ್ಟಡದ ಭದ್ರತಾ ಸಿಬ್ಬಂದಿ ಧನಂಜಯ್ ಚಟರ್ಜಿ ಈ ಅಪರಾಧವೆಸಗುತ್ತಾನೆ. ಹತ್ಯೆಯ ಯಾವುದೇ ಸುಳಿವು ಉಳಿಸಿದೆ ಈತ ಕಾಣೆಯಾಗುತ್ತಾನೆ. ಪೊಲೀಸರಿಗೆ ಈತ ಕಣ್ಮರೆಯಾಗಿರುವುದು ಬಿಟ್ಟರೆ ಬೇರೆ ಯಾವುದೇ ಸಾಕ್ಷ್ಯವು ದೊರೆಯುವುದಿಲ್ಲ. ಬಳಿಕ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗುತ್ತಾರೆ. ವಿಚಾರಣೆ ವೇಳೆ ಆರೋಪ ಸಾಬೀತಾಗಿ, ಧನಂಜಯ್‌ಗೆ ಗಲ್ಲು ಶಿಕ್ಷೆಯಾಗುತ್ತದೆ.

ಗೀತಾ–ಸಂಜಯ್‌ ಚೋಪ್ರಾ ಅಪಹರಣ ಪ್ರಕರಣ(1978):
ಮುಂಬೈನ ಜೈಲಿನಿಂದ ಬಿಡುಗಡೆಯಾದ ನಂತರ, ಕುಲ್ಜೀತ್ ಸಿಂಗ್ (ರಂಗ) ಮತ್ತು ಜಸ್ಬೀರ್ ಸಿಂಗ್ (ಬಿಲ್ಲಾ) ಎಂಬ ಇಬ್ಬರು ಖದೀಮರು ದೆಹಲಿಯಲ್ಲಿ ಅಪಹರಣ ದಂಧೆಯನ್ನು ಪ್ರಾರಂಭಿಸಲು ಆಲೋಚಿಸುತ್ತಾರೆ. ಅದರ ಭಾಗವಾಗಿ 16 ವರ್ಷದ ಗೀತಾ ಚೋಪ್ರಾ ಮತ್ತು ಆಕೆಯ 10 ವರ್ಷದ ಸಹೋದರ ಸಂಜಯ್ ಅವರನ್ನು ಅಪಹರಿಸುತ್ತಾರೆ. ಇಬ್ಬರೂ ಭಾರತೀಯ ನೌಕಾಪಡೆಯ ಕ್ಯಾಪ್ಟನ್‌ನ ಮಕ್ಕಳಾಗಿದ್ದು ಮತ್ತು ಆಕಾಶವಾಣಿ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಅವರನ್ನು ತಂದೆ ಕರೆದುಕೊಂಡು ಹೋಗಬೇಕಿತ್ತು.

ಗೀತಾ ಮತ್ತು ಸಂಜಯ್ ಇಬ್ಬರೂ ತಪ್ಪಿಸಿಕೊಳ್ಳಲು ಹೋರಾಡಿ ವಿಫಲರಾಗುತ್ತಾರೆ. ಆಸ್ಪತ್ರೆಯಲ್ಲಿ ಹೊಲಿಗೆ ಹಾಕಿಸಿಕೊಳ್ಳುವಷ್ಟರ ಮಟ್ಟಿಗೆ ಬಿಲ್ಲಾನನ್ನು ಗೀತಾ ಗಾಯಗೊಳಿಸುತ್ತಾಳೆ. ಹಣಕ್ಕಾಗಿ ಅಪಹರಣ ಮಾಡುವುದು ಬಿಲ್ಲಾ ಮತ್ತು ರಂಗಾ ಗುರಿಯಾಗಿತ್ತು. ಆದರೆ ಈ ಮಕ್ಕಳ ತಂದೆ ಅಷ್ಟೊಂದು ಶ್ರೀಮಂತರಲ್ಲ ಎಂದು ಅರಿತುಕೊಂಡ ನಂತರ ಅವರನ್ನು ಕೊಲ್ಲಲು ರಂಗ ಮತ್ತು ಬಿಲ್ಲಾ ನಿರ್ಧರಿಸುತ್ತಾರೆ.

ಸಂಜಯ್‌ ಅನ್ನು ಮೊದಲು ಕೊಲೆಗೈಯ್ಯುತ್ತಾರೆ. ಗೀತಾಳನ್ನು ಕೊಲ್ಲುವ ಮೊದಲು ಲೈಂಗಿಕ ಕಿರುಕುಳ ನೀಡಿರಬಹುದು ಎಂದು ಪೊಲೀಸರು ವರದಿ ನೀಡುತ್ತಾರೆ. 1982 ರಲ್ಲಿ ಆರೋಪಿಗಳಿಗೆ ಮರಣದಂಡನೆಯಾಗುತ್ತದೆ.

ಮಕ್ಕಳ ಕಲ್ಯಾಣಕ್ಕಾಗಿನ ಭಾರತೀಯ ಮಂಡಳಿಯು ಮಕ್ಕಳಿಗೆ (16 ವರ್ಷದೊಳಗಿನವರು) ಎರಡು ವಾರ್ಷಿಕ ಶೌರ್ಯ ಪ್ರಶಸ್ತಿಗಳನ್ನು ಸ್ಥಾಪಿಸುವುದರೊಂದಿಗೆ ಇಂದಿಗೂ ಗೀತಾ ಮತ್ತು ಸಂಜಯ್ ಚೋಪ್ರಾ ಅವರನ್ನು ಸ್ಮರಿಸುತ್ತದೆ. 1978 ರಿಂದ, ಸಂಜಯ್ ಚೋಪ್ರಾ ಪ್ರಶಸ್ತಿ ಮತ್ತು ಗೀತಾ ಚೋಪ್ರಾ ಪ್ರಶಸ್ತಿಯನ್ನು ಪ್ರತಿ ವರ್ಷ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯೊಂದಿಗೆ ನೀಡಲಾಗುತ್ತಿದೆ.

ನೀರಜ್ ಗ್ರೋವರ್ ಹತ್ಯೆ(2008):
ದೇಶವನ್ನೇ ದಿಗಿಲುಗೊಳಿಸಿದ ಇತ್ತೀಚಿನ ಹತ್ಯೆಯಿದು. ಟಿವಿ ಕಾರ್ಯಕ್ರಮ ನಿರ್ಮಾಪಕ ಮುಂಬೈನ ನೀರಜ್ ಗ್ರೋವರ್ ಕೊಲೆ ಪ್ರಕರಣ. ಶಾರೂಕ್‌ ಖಾನ್ ನಿರೂಪಣೆ ಮಾಡಿದ್ದ ‘ಕ್ಯಾ ಆಪ್ ಪಾಂಚ್ವಿ ಪಾಸ್ ಸೆ ತೇಜ್ ಹೈ’ ಮತ್ತು ಮಹಾಭಾರತದ ಪ್ರಸ್ತಾವಿತ ಮರುನಿರ್ಮಾಣದಂತಹ ಕಾರ್ಯಕ್ರಮಗಳ ನಿರ್ಮಾಪಕ. ಟಿವಿ ಆಡಿಷನ್ ಮೂಲಕ ಗ್ರೋವರ್‌ಗೆ ಕನ್ನಡದ ನಟಿ ಮಾರಿಯಾ ಸುಸೈರಾಜ್ ಪರಿಚಯವಾಗುತ್ತದೆ.

ಪರಿಚಯ ಸಂಬಂಧಕ್ಕೆ ತಿರುಗುತ್ತದೆ. ಇಬ್ಬರೂ ಅಂತಿಮವಾಗಿ ವಿವಾಹೇತರ ಸಂಬಂಧದಲ್ಲಿ ಸಿಲುಕುತ್ತಾರೆ. ಸುಸೈರಾಜ್ ಅವರ ಪತಿ ಕೊಚ್ಚಿಯಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿಯಾಗಿದ್ದ ಲೆಫ್ಟಿನೆಂಟ್ ಎಮಿಲ್ ಜೆರೋಮ್ ಮ್ಯಾಥ್ಯೂ. ಅವರಿಗೆ ಪತ್ನಿಯ ವಿಷಯ ತಿಳಿಯುತ್ತದೆ. ಪತ್ನಿಯೊಂದಿಗೆ ಅಕ್ರಮ ಸಂಬಂಧದಲ್ಲಿದ್ದ ಗ್ರೋವರ್‌ನನ್ನು ಕಂಡ ಮ್ಯಾಥ್ಯೂ ಇರಿದು ಕೊಲ್ಲುತ್ತಾನೆ.

ಬಳಿಕ ಗಂಡ ಮತ್ತು ಹೆಂಡತಿ ಇಬ್ಬರೂ ಗ್ರೋವರ್‌ನ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಮರೆಮಾಡಲು ಸಂಚು ರೂಪಿಸುತ್ತಾರೆ. ಮುಂಬೈನ ಹೊರವಲಯದಲ್ಲಿ ಗ್ರೋವರ್‌ ದೇಹದ ಭಾಗಗಗಳಿಂದ ಕೂಡಿದ್ದ ಚೀಲಗಳನ್ನು ಸುಟ್ಟುಹಾಕುತ್ತಾರೆ. ಮರಿಯಾ ಸ್ವತಃ ತಾನೇ ಹೋಗಿ ಗ್ರೋವರ್‌ ಕಾಣೆಯಾದ ಬಗ್ಗೆ ದೂರು ನೀಡುತ್ತಾಳೆ.
ಅಂತಿಮವಾಗಿ, ಸುಸೈರಾಜ್ ಅವರ ಫ್ಲಾಟ್‌ನ ಬಾಗಿಲಿನಲ್ಲಿ ರಕ್ತದ ಗುರುತುಗಳು ಕಂಡುಬರುತ್ತದೆ. ಇದು ಗ್ರೋವರ್ ಡಿಎನ್‌ಎ ಜೊತೆಗೆ ತಾಳೆಯಾಗುತ್ತದೆ. ಮ್ಯಾಥ್ಯೂಗೆ ನರಹತ್ಯೆ ಮತ್ತು ಸಾಕ್ಷ್ಯಾನಾಶಕ್ಕಾಗಿ ಒಟ್ಟು 13 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಮಾರಿಯಾ ಸುಸೈರಾಜ್ ಅವರು ಸಾಕ್ಷ್ಯವನ್ನು ನಾಶಪಡಿಸುವಲ್ಲಿ ಮಾತ್ರ ತಪ್ಪಿತಸ್ಥರೆಂದು ಮೂರು ವರ್ಷಗಳ ಶಿಕ್ಷೆ ವಿಧಿಸಲಾಯಿತು.

ನಿರ್ಭಯಾ ಹತ್ಯೆ:
ಡಿಸೆಂಬರ್ 16, 2012ರಂದು ದೆಹಲಿಯ ನಿರ್ಭಯಾ, ತನ್ನ ಭಾವಿ ಪತಿಯೊಂದಿಗೆ ಸಿನಿಮಾಕ್ಕೆ ತೆರಳಿ ಸಂಜೆ ಕತ್ತಲಾಗುವ ಹೊತ್ತಿಗೆ ಮನೆಗೆ ಮರಳುವ ವೇಳೆ ಖಾಸಗಿ ಬಸ್ ನಲ್ಲಿ ಆಕೆಯ ಮೇಲೆ ಅತ್ಯಾಚಾರವಾಗುತ್ತದೆ. ಚಲಿಸುತ್ತಿದ್ದ ಬಸ್ ನಲ್ಲಿ ಆರು ಜನ ಆರೋಪಿಗಳು ಕ್ರೂರವಾಗಿ ಅತ್ಯಾಚಾರ ನಡೆಸುತ್ತಾರೆ. ಮರುದಿನ ದೇಶದಾದ್ಯಂತ ಪ್ರಕರಣ ಬಿರುಗಾಳಿ ಎಬ್ಬಿಸುತ್ತದೆ. ಎಚ್ಚೆತ್ತ ದೆಹಲಿಯ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಾರೆ. ಘಟನೆಯಿಂದ ಆಸ್ಪತ್ರೆ ಸೇರಿದ ನಿರ್ಭಯಾಚಿಕಿತ್ಸೆ ಫಲಕಾರಿಯಾಗದೇ ಡಿಸೆಂಬರ್ 29, 2012ರಂದು ಆಕೆ ಕೊನೆಯುಸಿರೆಳೆಯುತ್ತಾರೆ. ದೇಶದಾದ್ಯಂತ ಹತ್ಯೆ ಖಂಡಿಸಿ ಪ್ರತಿಭಟನೆ, ಮೆರವಣಿಗೆಗಳು ನಡೆಯುತ್ತವೆ. 8 ವರ್ಷದ ಬಳಿಕ ಓರ್ವ ಬಾಲಕನ ಹೊರತುಪಡಿಸಿ ಉಳಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುತ್ತದೆ.

ಇದೀಗ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲಕರ್‌ ಪ್ರಕರಣ ಕೂಡ ಈ ಹಿಂದಿನ ಹತ್ಯೆಗಳನ್ನು ನೆನಪಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕರಣಕ್ಕೆ ಧರ್ಮದ ಬಣ್ಣ ಬಿದ್ದಿದೆ. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಹಲವರು ಆಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.