ADVERTISEMENT

ದೆಹಲಿಯಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಗ್ಯ ಸ್ಥಿತಿ ಗಂಭೀರ

ಪಿಟಿಐ
Published 17 ಜುಲೈ 2018, 2:52 IST
Last Updated 17 ಜುಲೈ 2018, 2:52 IST
   

ನವದೆಹಲಿ: ವಸತಿ ರಹಿತ, ಆರು ವರ್ಷ ವಯಸ್ಸಿನ ಬಾಲಕಿಯ ಮೇಲೆ 24 ವರ್ಷ ವಯಸ್ಸಿನ ವ್ಯಕ್ತಿ ಅತ್ಯಾಚಾರ ಎಸಗಿರುವ ಘಟನೆ ಮಧ್ಯ ದೆಹಲಿಯಲ್ಲಿ ನಡೆದಿದೆ.

ಘಟನೆ ನಡೆದ ಬೆನ್ನಲ್ಲೇ, ಆರೋಪಿಗೆ ಮರಣದಂಡನೆ ವಿಧಿಸಬೇಕು ಎಂದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಮುಖ್ಯಸ್ಥೆ ಸ್ವಾತಿ ಮಳಿವಾಳ್‌ ಒತ್ತಾಯಿಸಿದ್ದಾರೆ.

ಕೃತ್ಯ ಎಸಗಿರುವ ಆರೋಪಿಯು ಮಾದಕ ವಸ್ತು ವ್ಯಸನಿಯಾಗಿದ್ದು, ಬಾಲಕಿಯನ್ನು ಜುಲೈ 14ರಂದು ಇಲ್ಲಿನ ಮಿಂಟೊ ರಸ್ತೆಯಲ್ಲಿಯ ಕಾಳಿ ಮಂದಿರ ಬಳಿ ಆಟವಾಡುತ್ತಿದ್ದಾಗ ಅಪಹರಿಸಿದ್ದಾನೆ.

ADVERTISEMENT

ಬಾಲಕಿಯ ಕುಟುಂಬಕ್ಕೆ ಮನೆ ಇಲ್ಲ. ಅವರು ಕಾಳಿ ಮಂದಿರ ಬಳಿಯ ಪಾದಚಾರಿ ಮಾರ್ಗ(‘ಫುಟ್‌ಪಾತ್‌’) ಮೇಲೆ ವಾಸವಾಗಿದ್ದರು. ಆರೋಪಿಯು ‘ಫುಟ್‌ಪಾತ್‌’ ಮೇಲೆ ತಂಗುತ್ತಿದ್ದ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬಾಲಕಿಯನ್ನು ಹುಡುಕಲು ಸಾಧ್ಯವಾಗದ ಪೋಷಕರು, ಆತಂಕ ವ್ಯಕ್ತಪಡಿಸಿ ಮಗಳು ಕಾಣೆಯಾಗಿರುವುದಾಗಿ ಹೇಳಿದ್ದರು.

ರಕ್ತದ ಮಡುವಿನಲ್ಲಿ ಬಿದ್ದ ಸ್ಥಿತಿಯಲ್ಲಿ ಬಾಲಕಿ ರಾತ್ರಿ 11.30ರ ವೇಳೆಗೆ ಪತ್ತೆಯಾಗಿದ್ದು, ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು, ಅಪಾರ ರಕ್ತಸ್ರಾವವಾಗಿದೆ’ ಎಂದು ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಳಿವಾಳ್‌ ಹೇಳಿದ್ದಾರೆ.

ಬಾಲಕಿಯ ಗುಪ್ತಾಂಗಗಳಿಗೆ ತೀವ್ರ ಹಾನಿಯಾಗಿದೆ, ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ. ಕ್ರೂರವಾಗಿ ನಡೆಸಿರುವ ಅಕ್ರಮಣದಿಂದ ಬಾಲಕಿ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಬಾಲಕಿಯ ಪೋಷಕರದ್ದು ಕಡು ಬಡ ಕುಟುಂಬ. ಆಕೆಯ ತಂದೆ ರಿಕ್ಷಾಗಾಡಿ ಎಳೆಯುವ ಕೆಲಸ ಮಾಡುತ್ತಿದ್ದಾರೆ. ತಾಯಿ ಭಿಕ್ಷೆ ಬೇಡುತ್ತಾರೆ.
ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಳಿವಾಳ್‌ ಅವರು ಆಸ್ಪತ್ರೆಯಲ್ಲಿ ಬಾಲಕಿಯನ್ನು ಭೇಟಿ ಮಾಡಿದ್ದು, ಮಗುವಿನ ಪೋಷಕರು ಮತ್ತು ವೈದ್ಯರ ಜತೆ ಮಾತನಾಡಿದ್ದಾರೆ.

’ಬಾಲಕಿಗೆ ವೈದ್ಯಕೀಯ ಮತ್ತು ಪುನರ್ವಸತಿ ಕಲ್ಪಿಸಲು ಅಗತ್ಯ ಹಣಕಾಸು ಇತ್ಯಾದಿ ನೆರವನ್ನು ನೀಡಲು ಡಿಸಿಡಬ್ಲ್ಯೂ ಕ್ರಮ ಕೈಗೊಳ್ಳುತ್ತದೆ. ಜತೆಗೆ, ಸಂತ್ರಸ್ಥೆಗೆ ಪರಿಹಾರವನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದೆ’ ಎಂದು ಅವರು ಹೇಳಿದ್ದಾರೆ.

ತೀವ್ರ ಗಾಬರಿಗೊಂಡಿದ್ದ ಬಾಲಕಿ
‘ಮಗುವಿನ ಸ್ಥಿತಿ ತೀವ್ರ ಗಂಭೀರವಾಗಿದೆ. ನಾನು ಅವಳನ್ನು ಭೇಟಿಯಾದಾಗ ತೀವ್ರ ಭಯಗೊಂಡಿದ್ದಳು. ಇದು ನಾನು ಇಲ್ಲಿಯವರೆಗೆ ನೋಡಿದ ಪ್ರಕರಣಗಳಲ್ಲಿ ಅತ್ಯಂತ ಗಂಭೀರ ಮತ್ತು ಕ್ರೂರವಾದುದು. ಆ ಕುಟುಂಬಕ್ಕೆ ಮನೆ ಇಲ್ಲ. ಆಯೋಗವು ಬಾಲಕಿಗೆ ಪುನರ್ವಸತಿ ಕಲ್ಪಿಸಲು ಕ್ರಮಕೈಗೊಳ್ಳಲಿದೆ ಮತ್ತು ಸಾರ್ವಜನಿಕರು ಸಹಕರಿಸಬೇಕು’ ಎಂದಿರುವ ಸ್ವಾತಿ ಮಳಿವಾಳ್‌, ಆರೋಪಿಗೆ ತಕ್ಷಣ ಶಿಕ್ಷೆಯಾಗಬೇಕು ಎಂದೂ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.