ADVERTISEMENT

ಛತ್ತೀಸಗಡ ವಿಧಾನಸಭೆ ಚುನಾವಣೆ: ಶೇ 70ರಷ್ಟು ಮತದಾನ

ಪಿಟಿಐ
Published 12 ನವೆಂಬರ್ 2018, 20:15 IST
Last Updated 12 ನವೆಂಬರ್ 2018, 20:15 IST
ಛತ್ತೀಸಗಡದ ಸುಕ್ಮಾ ಜಿಲ್ಲೆಯ ಮರಿಗುಡಾದಲ್ಲಿ ಸಿಆರ್‌ಪಿಎಫ್‌ ಯೋಧರ ನೆರವಿನಿಂದ ಮತ ಚಲಾಯಿಸಲು ಬಂದ ವೃದ್ಧೆ -–ಪಿಟಿಐ ಚಿತ್ರ
ಛತ್ತೀಸಗಡದ ಸುಕ್ಮಾ ಜಿಲ್ಲೆಯ ಮರಿಗುಡಾದಲ್ಲಿ ಸಿಆರ್‌ಪಿಎಫ್‌ ಯೋಧರ ನೆರವಿನಿಂದ ಮತ ಚಲಾಯಿಸಲು ಬಂದ ವೃದ್ಧೆ -–ಪಿಟಿಐ ಚಿತ್ರ   

ರಾಯಪುರ:ಛತ್ತೀಸಗಡದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಿಗೆ ಸೋಮವಾರ ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಶೇ 70ರಷ್ಟು ಮತದಾನವಾಗಿದೆ.

ನಕ್ಸಲರ ಪ್ರಾಬಲ್ಯವಿರುವ ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಹತರಾಗಿದ್ದಾರೆ.

ಕೋಬ್ರಾ ಬಟಾಲಿಯನ್‌ನ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಎರಡು ಘಟನೆಗಳನ್ನು ಹೊರತುಪಡಿಸಿದರೆ ಉಳಿದ ಕಡೆ ಮತದಾನ ಶಾಂತಿಯುತವಾಗಿ ನಡೆಯಿತು.

ADVERTISEMENT

ತಾಂತ್ರಿಕ ದೋಷದಿಂದಾಗಿ ಕೆಲವು ಕಡೆ ಎಲೆಕ್ಟ್ರಾನಿಕ್‌ ಮತಯಂತ್ರ ಮತ್ತು ವಿವಿ ಪ್ಯಾಟ್‌ಗಳನ್ನು ಬದಲಾಯಿಸಲಾಯಿತು ಎಂದು ಚುನಾವಣಾ ಆಯೋಗವು ತಿಳಿಸಿದೆ.

ನಕ್ಸಲರು ದಾಳಿ ಭೀತಿ ಹಿನ್ನೆಲೆಯಲ್ಲಿ ಮತದಾನ ನಡೆಯುತ್ತಿರುವ ಪ್ರದೇಶದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ಎರಡನೇ ಹಂತದಲ್ಲಿ72 ಕ್ಷೇತ್ರಗಳಿಗೆ ನವಂಬರ್‌ 20 ರಂದು ಮತದಾನ ನಡೆಯಲಿದೆ.

ದಾಂತೇವಾಡದಲ್ಲಿ ಕಡಿಮೆ ಮತದಾನ

ಮೊದಲ ಹಂತದ ಚುನಾವಣೆಯಲ್ಲಿ ನಕ್ಸಲರ ಪ್ರಾಬಲ್ಯವಿರುವ ದಾಂತೇವಾಡದಲ್ಲಿ ಅತ್ಯಂತ ಕಡಿಮೆ (ಶೇ 49) ಮತದಾನವಾಗಿದೆ. ಉಳಿದಂತೆ ಎಲ್ಲ ಕಡೆ ಶೇ 60ರಿಂದ ಶೇ 70ರಷ್ಟು ಮತದಾನವಾಗಿದೆ.

2014 ಡಿಸೆಂಬರ್‌ನಲ್ಲಿ ಶರಣಾಗತಿಯಾಗಿದ್ದ ನಕ್ಸಲ್‌ ದಂಪತಿ ಈ ಬಾರಿ ನಾರಾಯಣಪುರದಲ್ಲಿ ತಮ್ಮ ಮತ ಚಲಾಯಿಸಿದರು.

ಬಾಂಬ್‌ ಪತ್ತೆ: ಕೊಂಟಾದಲ್ಲಿ ಮತಗಟ್ಟೆ ಸಮೀಪ ಮೂರು ಸುಧಾರಿತ ಬಾಂಬ್‌ ಪತ್ತೆಯಾಗಿದ್ದು, ಸಿಆರ್‌ಪಿಎಫ್‌ ಸಿಬ್ಬಂದಿ ಬಾಂಬ್‌ ನಿಷ್ಕ್ರಿಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.