ADVERTISEMENT

70 ಅಡಿ ಉದ್ದ, 10 ಟನ್‌ ತೂಕದ ಉಕ್ಕಿನ ಸೇತುವೆಯನ್ನೇ ಕದ್ದರು!

ಪಿಟಿಐ
Published 24 ಜನವರಿ 2026, 14:51 IST
Last Updated 24 ಜನವರಿ 2026, 14:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊರ್ಬಾ: ಛತ್ತೀಸಗಢದ ಕೊರ್ಬಾ ನಗರದಲ್ಲಿ, 4 ದಶಕಗಳ ಹಿಂದೆ ನಿರ್ಮಿಸಲಾಗಿದ್ದ, 70 ಅಡಿ ಉದ್ದದ, 10 ಟನ್‌ಗಿಂತ ಹೆಚ್ಚು ತೂಕವಿದ್ದ ಉಕ್ಕಿನ ಸೇತುವೆಯನ್ನೇ ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. 

ಕಳ್ಳತನದಲ್ಲಿ 15 ಮಂದಿ ಭಾಗಿಯಾಗಿದ್ದಾರೆ. ಈ ಪೈಕಿ ಐವರನ್ನು ಬಂಧಿಸಲಾಗಿದ್ದು 10 ಮಂದಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಲುವೆಯೊಳಗೆ ಅಡಗಿಸಿಟ್ಟಿದ್ದ 7 ಟನ್‌ ಉಕ್ಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದರು.

‘ಸೇತುವೆಯನ್ನು ಕತ್ತರಿಸಿ ಅದರ ಭಾಗಗಳನ್ನು ಗುಜರಿಗೆ ಮಾರಾಟ ಮಾಡಲು ಯೋಜಿಸಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ಒ‍ಪ್ಪಿಕೊಂಡಿದ್ದಾರೆ. ಗ್ಯಾಸ್ ಕಟರ್‌ ಅನ್ನು ಬಳಸಿ ಸೇತುವೆಯನ್ನು ಕತ್ತರಿಸಿದ್ದಾರೆ’ ಎಂದೂ ಹೇಳಿದರು. 

ADVERTISEMENT

ಧೋಧಿಪಾರಾ ಪ್ರದೇಶದ ವಾರ್ಡ್‌ ಸಂಖ್ಯೆ 17ರಲ್ಲಿ, ಹಸ್ದಿಯೊ ಎಡ ಕಾಲುವೆ ಮೇಲೆ ಪಾದಚಾರಿ ಮಾರ್ಗಕ್ಕೆಂದು ಈ ಸೇತುವೆಯನ್ನು ನಿರ್ಮಿಸಲಾಗಿತ್ತು. 

ಜ.18ರಂದು ಮುಂಜಾನೆ ಸೇತುವೆಯು ಕಾಣೆಯಾಗಿದ್ದನ್ನು ಕಂಡ ಸ್ಥಳೀಯರು ದಿಗ್ಭ್ರಮೆಗೊಂಡಿದ್ದರು. ಬಳಿಕ ದೂರು ದಾಖಲಿಸಲಾಯಿತು. ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.