ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಕೆಂಪು ಕೋಟೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳು ತಾಲೀಮು ನಡೆಸಿದರು
ನವದೆಹಲಿ: ಕೆಂಪು ಕೋಟೆಯಲ್ಲಿ ನಡೆಯಲಿರುವ 79ನೇ ಸ್ವಾತಂತ್ರ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ಆರೈಕೆ ಸಂಸ್ಥೆಗಳಲ್ಲಿರುವವರು, ಪಿಎಂ ಕೇರ್ಸ್ ಅಡಿ ನೆರವು ಪಡೆಯುತ್ತಿರುವ ಮಕ್ಕಳು ಮತ್ತು ಮಹಿಳಾ ಪರ ಕಾರ್ಯಕರ್ತೆಯರು ಪಾಲ್ಗೊಳ್ಳಲಿದ್ದಾರೆ.
ದೇಶದಾದ್ಯಂತ ಮಕ್ಕಳು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ 171 ಮಂದಿ, ಪ್ರಧಾನಿ ನರೇಂದ್ರ ಮೋದಿಯವರು ಧ್ವಜಾರೋಹಣ ಮಾಡುವುದನ್ನು ಮತ್ತು ದೇಶವನ್ನು ಉದ್ದೇಶಿಸಿ ಮಾತನಾಡುವುದನ್ನು ನೇರವಾಗಿ ಕಣ್ತುಂಬಿಕೊಳ್ಳಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಸತ್, ಪ್ರಧಾನ ಮಂತ್ರಿ ಸಂಗ್ರಹಾಲಯ, ಕರ್ತವ್ಯಪಥ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲು ಇವರಿಗೆ ಅವಕಾಶ ನೀಡಲಾಗಿದೆ. ಪ್ರಧಾನ ಮಂತ್ರಿಯವರ ‘ಮಕ್ಕಳ ಮತ್ತು ಮಹಿಳೆಯರ ಸಬಲೀಕರಣದಿಂದ ದೇಶದ ನಿಜವಾದ ಏಳಿಗೆ ಸಾಧ್ಯ’ ಎನ್ನುವ ಆಶಯದ ಪ್ರತಿನಿಧಿಯಾಗಿ ಇವರನ್ನು ಕರೆಸಲಾಗುತ್ತಿದೆ. ಪ್ರಧಾನಿಗಳ ಆಶಯದ ನೈಜ ಉದಾಹರಣೆಯಾಗಿ ಈ ವಿಶೇಷ ಅತಿಥಿಗಳು ನಮ್ಮ ಮುಂದೆ ಬಾಳ್ವೆ ಮಾಡುತ್ತಿದ್ದಾರೆ. ಸಮಾಜದಲ್ಲಿ ತಳಮಟ್ಟದಲ್ಲಿಯೂ ಅವರು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಅನೇಕ ಕುಟುಂಬಗಳಿಗೆ ಗೌರವ, ಹೊಸ ಭರವಸೆ, ಅವಕಾಶವನ್ನು ತಂದುಕೊಟ್ಟಿದೆ. ದೇಶವನ್ನು ಕಟ್ಟಲು ನೆರವಾಗುತ್ತಿರುವ ಇವರನ್ನು ಸ್ವಾತಂತ್ರ್ಯ ದಿನದಂದು ಗುರುತಿಸುವ ಮೂಲಕ ಅವರ ಕೊಡುಗೆಯನ್ನು ಸಂಭ್ರಮಿಸುವ ವಿಧಾನವಾಗಿದೆ ಎಂದು ಸಚಿವೆ ಅನ್ನಪೂರ್ಣ ದೇವಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.