ಪತ್ತನಂತಿಟ್ಟ: ವಿಶ್ವಶಾಂತಿಗಾಗಿ ಪ್ರಾರ್ಥಿಸಿ, ಇಬ್ಬರು ಭಕ್ತರು ಸುಮಾರು 223 ದಿನಗಳ ಕಾಲ 8,000 ಕಿ.ಮೀ ದೂರ ಕಾಲ್ನಡಿಗೆ ಮೂಲಕ ನಡೆದುಕೊಂಡು ಬಂದು ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ತಲುಪಿದ್ದಾರೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.
ಕಾಸರಗೋಡು ಜಿಲ್ಲೆಯ ರಾಮದಾಸ್ ನಗರದ ನಿವಾಸಿಗಳಾದ ಸನತ್‌ಕುಮಾರ್ ನಾಯಕ್ ಮತ್ತು ಸಂಪತ್‌ಕುಮಾರ್ ಶೆಟ್ಟಿ ಅವರು 2024ರ ಮೇ 26ರಂದು ಕೇರಳದಿಂದ ಬದರಿನಾಥಕ್ಕೆ ರೈಲಿನಲ್ಲಿ ಪ್ರಯಾಣಿಸಿದರು. ಜೂನ್ 3ರಂದು ಅವರು ತಮ್ಮ 'ಇರುಮುಡಿ' ಹೊತ್ತು ಅಲ್ಲಿಂದ ಶಬರಿಮಲೆಗೆ ಪ್ರಯಾಣ ಬೆಳಸಿದ್ದರು. ನಿನ್ನೆ(ಶನಿವಾರ) ಅವರು ಶಬರಿಮಲೆ ತಲುಪಿದ್ದಾರೆ. ದೇವರ ದರ್ಶನ ಪಡೆದಿದ್ದಾರೆ ಎಂದು ಟಿಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
‘ಅವರು ತಮ್ಮ ಪ್ರಯಾಣದ ಸಮಯದಲ್ಲಿ, ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳು, ಅಯೋಧ್ಯೆ, ಉಜ್ಜಯಿನಿ, ದ್ವಾರಕಾ, ಪುರಿ, ಜಗನ್ನಾಥ, ರಾಮೇಶ್ವರಂ ಸೇರಿದಂತೆ ವಿವಿಧ ಯಾತ್ರಾ ಸ್ಥಳಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಿದರು ಎಂದು ಟಿಡಿಬಿ ಹೇಳಿದೆ.
ಪ್ರಯಾಣದ ಸಮಯದಲ್ಲಿ ದೇವಾಲಯಗಳಲ್ಲಿ ಉಳಿದುಕೊಂಡಿದ್ದರು. ದೇವಾಲಯಗಳಲ್ಲಿ ನೀಡುತ್ತಿದ್ದ ಪ್ರಸಾದ, ಕೆಲವೊಮ್ಮೆ ತಾವೇ ಊಟ ತಯಾರಿಸಿಕೊಂಡು ತಿನ್ನುತ್ತಿದ್ದರು. ಶಬರಿಮಲೆಗೆ ಆಗಮಿಸಿದ ಅವರನ್ನು ಟಿಡಿಬಿ ಅಧಿಕಾರಿಗಳು 'ಚುಕ್ಕು ವೆಲ್ಲಂ' (ಒಣಗಿದ ಶುಂಠಿ ಹಾಕಿದ ನೀರು) ನೀಡಿ ಸ್ವಾಗತಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.