ADVERTISEMENT

85 ವರ್ಷದ ಕ್ಯಾನ್ಸರ್ ರೋಗಿ, ಮತ್ತವರ ಪತ್ನಿ ಕೋವಿಡ್-19 ಗೆದ್ದು ಬಂದ ಕಥೆಯಿದು...

ಏಜೆನ್ಸೀಸ್
Published 18 ಜುಲೈ 2020, 12:14 IST
Last Updated 18 ಜುಲೈ 2020, 12:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭುವನೇಶ್ವರ: ಒಡಿಶಾದ ಕೇಂದ್ರಪಾಡ ಜಿಲ್ಲೆಯಲ್ಲಿ 85 ವರ್ಷದ ಕ್ಯಾನ್ಸರ್ ರೋಗಿ ಮತ್ತು ಅವರ ಪತ್ನಿ ಕೋವಿಡ್-19ನಿಂದ ಗುಣಮುಖರಾಗಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸುರೇಂದ್ರ ಪತಿ ಮತ್ತು 78 ವರ್ಷದ ಅವರ ಪತ್ರಿ ಸಾವಿತ್ರಿ ಅವರು ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರಪರ ಜಿಲ್ಲಾಧಿಕಾರಿ ಸಮರ್ಥ್ ವರ್ಮಾ ತಿಳಿಸಿದ್ದಾರೆ.

ಈ ದಂಪತಿ ಸಾಂಕ್ರಾಮಿಕ ರೋಗದಿಂದ ಗೆದ್ದು ಬರಲು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ ಮತ್ತು ಅವರಿಗೆ ನಮ್ಮ ಶುಭಾಶಯಗಳು ಎಂದು ಜಿಲ್ಲಾಧಿಕಾರಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಜೂನ್ 8 ರಂದು ಕಿಮೋಥೆರಪಿಗಾಗಿ ಪತಿ ಅವರನ್ನು ಕಟಕ್‌ನ ಆಚಾರ್ಯ ಹರಿಹರ್ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಈ ವೇಳೆ ಅವರ ಪತ್ನಿಯು ಅಲ್ಲಿ ಹಾಜರಿದ್ದರು. ಜೂನ್ 29ರಂದು ದಂಪತಿಗೆ ಕೋವಿಡ್-19 ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿತ್ತು ಎಂದು ಕೇಂದ್ರಪರಾದ ಹೆಚ್ಚುವರಿ ಜಿಲ್ಲಾ ವೈದ್ಯಕೀಯ ಅಧಿಕಾರಿ (ಎಡಿಎಂಒ) ಎಂ.ಎಚ್. ಬೀಗ್ ತಿಳಿಸಿದ್ದಾರೆ.

ಕೂಡಲೇ ಅವರನ್ನು ಕಟಕ್‌ನಲ್ಲಿನ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. 10 ದಿನಗಳ ಚಿಕಿತ್ಸೆಯ ಬಳಿಕ ಸೋಂಕಿನಿಂದ ಮುಕ್ತವಾಗಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದಾದ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ದಂಪತಿಯನ್ನು ಕೇಂದ್ರಪರಾ ಬ್ಲಾಕ್‌ನ ಬಾಗಡ ಗ್ರಾಮ ಪಂಚಾಯತ್ ಪ್ರದೇಶದ ಕೋವಿಡ್ -19 ಆರೈಕೆ ಕೇಂದ್ರದಲ್ಲಿ ಇರಿಸಲಾಗಿತ್ತು. ಬಳಿಕ ಅವರನ್ನು ಶುಕ್ರವಾರ ಇಲ್ಲಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದಂಪತಿ, ವಿಶೇಷವಾಗಿ ಸುರೇಂದ್ರ ಪತಿ ಅವರು ವಯಸ್ಸಾಗಿದ್ದರೂ ಕೂಡ ಕೊರೊನಾವೈರಸ್‌ ವಿರುದ್ಧ ಕಠಿಣ ಮತ್ತು ದೃಢ ನಿಶ್ಚಯದಿಂದ ಹೋರಾಡಿದರು. ಮೂಲತಃ ಕ್ಯಾನ್ಸರ್ ರೋಗಿಗಳಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಈ ಮೂಲಕ ಕೋವಿಡ್-19 ಅನ್ನು ಸೋಲಿಸಬಹುದೆಂದು ದಂಪತಿ ಜೋರಾಗಿ ಮತ್ತು ಸ್ಪಷ್ಟವಾಗಿ ಸಂದೇಶ ಸಾರಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.