ನರೇಂದ್ರ ಮೋದಿ
ನವದೆಹಲಿ: ಸಂಸತ್ತಿನ ಈ ಮುಂಗಾರು ಅಧಿವೇಶನ ಗೆಲುವನ್ನು ಸಂಭ್ರಮಿಸುವ ಅಧಿವೇಶನದಂತೆ ಭಾಸವಾಗುತ್ತಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತ ಧ್ವಜ ಹಾರಿದೆ, ಆಪರೇಷನ್ ಸಿಂಧೂರವು ದೇಶದ ಸೈನ್ಯದ ಬಲವನ್ನು ಜಗತ್ತಿಗೆ ತೋರಿಸಿದೆ, ದೇಶದ ಅನೇಕ ಭಾಗಗಳು ನಕ್ಸಲ್ ಮುಕ್ತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದೊಂದು ದಶಕದಲ್ಲಿ ದೇಶ ಶಾಂತಿ ಮತ್ತು ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದ್ದಾರೆ.
‘ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಅಡಿಯಲ್ಲಿ ಭಯೋತ್ಪಾದಕರ ನೆಲೆಗಳನ್ನು ಕೇವಲ 22 ನಿಮಿಷಗಳಲ್ಲಿ ನೆಲಸಮ ಮಾಡಲಾಯಿತು. ಇದು ಭಾರತದ ಮಿಲಿಟರಿ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ’ ಎಂದು ಹೇಳಿದರು.
‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತ ಧ್ವಜ ಹಾರುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ. ಭವಿಷ್ಯದ ಯೋಜನೆಗಳಿಗೆ ಇದು ಸ್ಫೂರ್ತಿಯಾಗಿದೆ’ ಎಂದು ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಪಯಣವನ್ನು ಸ್ಮರಿಸಿದರು.
‘ದೇಶದಲ್ಲಿ ನಕ್ಸಲ್ ಚಟುವಟಿಕೆಗಳನ್ನು ಕೊಲೆಗೊಳಿಸುವ ಸಂಕಲ್ಪದೊಂದಿಗೆ ನಮ್ಮ ಭದ್ರತಾ ಪಡೆಗಳು ಮುನ್ನಡೆಯುತ್ತಿವೆ. ಅನೇಕ ಜಿಲ್ಲೆಗಳು ಇಂದು ನಕ್ಸಲ್ ಮುಕ್ತವಾಗಿವೆ. ಇಂದು ‘ಕೆಂಪು ಕಾರಿಡಾರ್‌ಗಳು' 'ಹಸಿರು ಬೆಳವಣಿಗೆಯ ವಲಯ'ಗಳಾಗಿ ಮಾರ್ಪಡಾಗುತ್ತಿವೆ’ ಎಂದರು.
‘2014ಕ್ಕಿಂತ ಮೊದಲು ದೇಶದ ಹಣದುಬ್ಬರದ ದರ ಎರಡಂಕಿಯಲ್ಲಿತ್ತು. ಇಂದು ಹಣದುಬ್ಬರದ ದರ ಶೇ 2ಕ್ಕೆ ಇಳಿದಿದೆ. ದೇಶದಲ್ಲಿ ಸುಮಾರು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಅಲ್ಲದೇ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಮುನ್ನಡೆಯುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.