ADVERTISEMENT

ದಾಖಲೆ ನೋಂದಣಿ | ಆಧಾರ್ ನೀಡುವುದು ಐಚ್ಛಿಕ: ಭೂಸಂಪನ್ಮೂಲ ಇಲಾಖೆಯಿಂದ ಹೊಸ ಕರಡು

ಪಿಟಿಐ
Published 28 ಮೇ 2025, 15:47 IST
Last Updated 28 ಮೇ 2025, 15:47 IST
   

ನವದೆಹಲಿ: ಜಮೀನು ಕಾಗದಪತ್ರಗಳನ್ನು ಆನ್‌ಲೈನ್‌ ಮೂಲಕ ನೋಂದಾಯಿಸುವವರು ಆಧಾರ್ ಸಂಖ್ಯೆ ಹೊಂದಿಲ್ಲದೆ ಇದ್ದರೆ ಅಥವಾ ಆಧಾರ್ ಸಂಖ್ಯೆಯನ್ನು ನೀಡಲು ಬಯಸದೆ ಇದ್ದರೆ, ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶವನ್ನು ಪ್ರಸ್ತಾವಿತ ಮಸೂದೆಯೊಂದು ಹೊಂದಿದೆ.

ಹೊಸ ಮಸೂದೆಯು 117 ವರ್ಷಗಳಷ್ಟು ಹಳೆಯದಾಗಿರುವ ನೋಂದಣಿ ಕಾಯ್ದೆ–1908ರ ಬದಲಿಗೆ ಜಾರಿಗೆ ಬರಲಿದೆ.

ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಭೂಸಂಪನ್ಮೂಲ ಇಲಾಖೆಯು ಸಿದ್ಧಪಡಿಸಿರುವ ಈ ಮಸೂದೆಯ ಕರಡನ್ನು ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಲಾಗಿದೆ, ಸಲಹೆಗಳು ಇದ್ದರೆ ಸಲ್ಲಿಸುವಂತೆ ಸೂಚಿಸಲಾಗಿದೆ. ಆನ್‌ಲೈನ್‌ ನೋಂದಣಿ, ದಾಖಲೆಗಳನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ ಸಲ್ಲಿಸುವುದು ಹಾಗೂ ಅವುಗಳನ್ನು ಸ್ವೀಕರಿಸುವುದು, ಎಲೆಕ್ಟ್ರಾನಿಕ್ ರೂಪದಲ್ಲಿ ನೋಂದಣಿ ಪ್ರಮಾಣಪತ್ರ ನೀಡುವುದು, ದಾಖಲೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ಇರಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ಅಂಶವು ಮಸೂದೆಯಲ್ಲಿದೆ.

ADVERTISEMENT

ಆಧಾರ್ ಸಂಖ್ಯೆಯನ್ನು ಬಳಸಿ ದೃಢೀಕರಿಸುವ ವ್ಯವಸ್ಥೆಗೂ ಅವಕಾಶ ಇದೆ ಎಂದು ಮಸೂದೆ ಹೇಳುತ್ತದೆ.

ನೋಂದಣಿ ಕಾಯ್ದೆಯ ಅಡಿಯಲ್ಲಿ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ಮಾರಾಟ ಕ್ರಯಪತ್ರ, ಉಡುಗೊರೆ ರೂಪದಲ್ಲಿ ನೀಡಿದ ಆಸ್ತಿಗಳ ಕ್ರಯಪತ್ರ, ಭೋಗ್ಯಕ್ಕೆ ನೀಡಿದ ಆಸ್ತಿ ಕುರಿತ ದಾಖಲೆಗಳನ್ನು ನೋಂದಣಿ ಮಾಡಿಸಬೇಕು. ಉಯಿಲು, ಅಧಿಕಾರಪತ್ರ, ಆಸ್ತಿ ಹಕ್ಕುಗಳ ಕುರಿತಾಗಿ ನ್ಯಾಯಾಲಯ ನೀಡಿದ ಆದೇಶಗಳನ್ನು ನೋಂದಣಿ ಮಾಡಿಸಬೇಕು ಎಂದು ಕೂಡ ಕಾಯ್ದೆ ಹೇಳುತ್ತದೆ.

ಪ್ರಸ್ತುತ ಕಾಲಘಟ್ಟದ ಆಸ್ತಿ ಮತ್ತು ವಹಿವಾಟು ಪದ್ಧತಿಗಳನ್ನು ಒಳಗೊಳ್ಳುವ ಗುರಿಯೊಂದಿಗೆ ಕರಡು ಮಸೂದೆಯು ಕಡ್ಡಾಯ ನೋಂದಣಿಯ ವ್ಯಾಪ್ತಿಯನ್ನು ಹಿಗ್ಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಡು ಮಸೂದೆಯಲ್ಲಿನ ಅಂಶಗಳು...

  • ವ್ಯಕ್ತಿಗಳಿಗೆ ಹಾಗೂ ಸಣ್ಣ ಉದ್ದಿಮೆಗಳಿಗೆ ನೋಂದಣಿ ಪ್ರಕ್ರಿಯೆಯು ಸುಲಭವಾಗಿ ದಕ್ಕುವಂತೆ ಆಗಬೇಕು ಎಂಬ ಉದ್ದೇಶದಿಂದ ಭಾಷೆಯನ್ನು ಸರಳಗೊಳಿಸುವುದಕ್ಕೆ ಇದು ಉತ್ತೇಜನ ನೀಡುತ್ತದೆ

  • ಈಗಿರುವ ಕಾನೂನಿನ ಪ್ರಕಾರ ದಾಖಲೆಗಳನ್ನು ನೋಂದಣಿ ಕಚೇರಿಯಲ್ಲಿ ಸಲ್ಲಿಸಬೇಕು. ಕರಡು ಮಸೂದೆಯು ದಾಖಲೆಗಳನ್ನು ಖುದ್ದಾಗಿ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಸಲ್ಲಿಸಬಹುದು ಎಂದು ಹೇಳುತ್ತದೆ

  • ಹೊಸ ಮಸೂದೆಯು ವ್ಯಕ್ತಿಯ ಭಾವಚಿತ್ರವನ್ನು ಡಿಜಿಟಲ್ ಕ್ಯಾಮೆರಾ ಮೂಲಕ ಕ್ಲಿಕ್ಕಿಸಿ ಸಲ್ಲಿಸಬಹುದು ಎಂದು ಹೇಳುತ್ತದೆ, ಬೆರಳಚ್ಚನ್ನು ಬಯೋಮೆಟ್ರಿಕ್ ಸಾಧನದ ಮೂಲಕವೂ ಸಲ್ಲಿಸಲು ಅವಕಾಶ ಕಲ್ಪಿಸುತ್ತದೆ

  • ಡಿಜಿಟಲ್ ಸಹಿಗಳನ್ನು ಕೂಡ ಸಲ್ಲಿಸಲು ಅವಕಾಶ ಇದೆ. ಆಧಾರ್ ಸಂಖ್ಯೆ ಇಲ್ಲ ಎಂಬ ಕಾರಣಕ್ಕೆ ಯಾರಿಗೂ ನೋಂದಣಿ ಸೌಲಭ್ಯ ನಿರಾಕರಿಸುವಂತಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.