ADVERTISEMENT

ಆಧಾರ್ ಸುರಕ್ಷಿತ ಬಳಕೆಗೆ ಮಾರ್ಗಸೂಚಿ ಪ್ರಕಟಿಸಿದ ಯುಐಡಿಎಐ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 19:31 IST
Last Updated 10 ಜನವರಿ 2023, 19:31 IST
ಆಧಾರ್
ಆಧಾರ್   

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಆಧಾರ್‌ ಗುರುತಿನ ಚೀಟಿಯನ್ನು ಗುರುತು ದೃಢೀಕರಣಕ್ಕಾಗಿ ಪಡೆಯುವ ಸಂಸ್ಥೆಗಳಿಗೆ (ಒವಿಎಸ್‌ಇ) ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆಧಾರ್ ಬಳಕೆದಾರರ ಮಟ್ಟದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಹಾಗೂ ಅವರ ವಿಶ್ವಾಸ ಹೆಚ್ಚಿಸುವ ಮಾರ್ಗಗಳನ್ನು ಇದು ಒಳಗೊಂಡಿವೆ.

ಆಧಾರ್ ಕಾರ್ಡ್‌ ಬಳಕೆದಾರರ ಸ್ಪಷ್ಟ ಒಪ್ಪಿಗೆಯ ನಂತರವೇ ಅವರ ಕಾರ್ಡ್ ಅನ್ನು ಸಂಸ್ಥೆಗಳು ಗುರುತು ದೃಢೀಕರಣಕ್ಕೆ ಬಳಸಬೇಕು. ಭೌತಿಕ ಪರಿಶೀಲನೆ ವೇಳೆ, ಕಾರ್ಡ್‌ನ ಬಳಕೆದಾರರಿಗೆ ಅದರ ಸುರಕ್ಷತೆ ಹಾಗೂ ಗೋಪ್ಯತೆಯನ್ನು ಕಾಪಾಡುವ ಭರವಸೆ ನೀಡುವ ಸೌಜನ್ಯ ತೋರಬೇಕು ಎಂದು ಯುಐಡಿಎಐ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಪರಿಶೀಲನೆಗೆ ಬಳಕೆದಾರರು ನೀಡಿದ ಒಪ್ಪಿಗೆಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬೇಕು. ಯುಐಡಿಎಐ ಅಥವಾ ಇತರೆ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಪರಿಶೋಧನೆ (ಆಡಿಟ್) ನಡೆಸುವಾಗ, ಈ ದಾಖಲೆಗಳನ್ನು ಒದಗಿಸಬೇಕು. ಭೌತಿಕ ರೂಪದಲ್ಲಿ ಅಥವಾ ಎಲೆಕ್ಟ್ರಾನಿಲ್ ರೂಪದಲ್ಲಿ ಆಧಾರ್‌ ದಾಖಲೆಯನ್ನು ಪಡೆದುಕೊಳ್ಳುವ ಬದಲು, ಆಧಾರ್ ಪತ್ರದಲ್ಲಿರುವ (ಇ–ಆಧಾರ್, ಎಂ–ಆಧಾರ್ ಅಥವಾ ಪಿವಿಸಿ ಕಾರ್ಡ್‌ ರೂಪದಲ್ಲಿರುವ ಆಧಾರ್‌) ಕ್ಯೂಆರ್‌ ಕೋಡ್‌ ಬಳಸಿಕೊಂಡು, ಗುರುತಿನ ದಾಖಲೆಯನ್ನು ದೃಢಪಡಿಸಿಕೊಳ್ಳಬಹುದು ಎಂದು ತಿಳಿಸಿದೆ.

ADVERTISEMENT

ಆಧಾರ್‌ ಆಫ್‌ಲೈನ್ ಪರಿಶೀಲನೆ ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಸಂಸ್ಥೆಗಳು ಬಳಕೆದಾರರಿಗೆ ಸೇವೆಯನ್ನು ನಿರಾಕರಿಸುವಂತಿಲ್ಲ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಬೇಕು. ಇತರೆ ದಾಖಲೆಗಳ ಮೂಲಕ ಬಳಕೆದಾರರು ತಮ್ಮ ಗುರುತನ್ನು ದೃಢಪಡಿಸಲು ಸಾಧ್ಯವಾಗಬೇಕು. ಸಂಸ್ಥೆಗಳು ಆಫ್‌ಲೈನ್ ವಿಧಾನದಲ್ಲಿ ಆಧಾರ್ ಪರಿಶೀಲನೆ ನಡೆಸಿದ ಬಳಿಕ, ಬಳಕೆದಾರರ ಆಧಾರ್ ಮಾಹಿತಿಯನ್ನು ಸಂಗ್ರಹಿಸಿ ಇಡುವಂತಿಲ್ಲ ಮತ್ತು ಬಳಕೆ ಮಾಡುವಂತಿಲ್ಲ. ಒಂದು ವೇಳೆ ಆಧಾರ್‌ ದತ್ತಾಂಶವು ಯಾವುದಾದರೂ ಕಾರಣಕ್ಕೆ ಬೇಕಾಗುತ್ತದೆ ಎಂದಾದಲ್ಲಿ, ಮಸುಕಾಗಿಸಿದ ಸ್ವರೂಪದಲ್ಲಿ ಅದರ ಪ್ರತಿಯನ್ನು ಇರಿಸಿಕೊಳ್ಳಬಹುದು ಎಂದು ಮಾರ್ಗಸೂಚಿ ತಿಳಿಸಿದೆ.

ಆಧಾರ್ ಬಳಕೆಗೆ ಆಫ್‌ಲೈನ್‌ನಲ್ಲಿ ನಡೆಯುವ ಪರಿಶೀಲನೆ ಅಥವಾ ಕೆವೈಸಿ ಪ್ರಕ್ರಿಯೆಯು, ಯುಐಡಿಎಐನ ಕೇಂದ್ರೀಯ ಗುರುತು ದತ್ತಾಂಶ ಸರ್ವರ್‌ ಜತೆ ಸಂಪರ್ಕ ಸಾಧಿಸದೇ, ಸ್ಥಳೀಯವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಸಂಸ್ಥೆಗಳು ಕಾನೂನುಬದ್ಧ ಉದ್ದೇಶಕ್ಕೆ ಮಾತ್ರ ಬಳಕೆದಾರರ ಆಧಾರ್ ಮಾಹಿತಿಯನ್ನು ಪರಿಶೀಲಿಸಬೇಕು ಎಂದು ಮಾರ್ಗಸೂಚಿಗಳು ಉಲ್ಲೇಖಿಸಿವೆ.

ದುರ್ಬಳಕೆ ಮಾಹಿತಿ ನೀಡುವುದು ಕಡ್ಡಾಯ
ಬಳಕೆದಾರರ ಆಧಾರ್ ಮಾಹಿತಿಯು ದುರ್ಬಳಕೆಯಾಗುತ್ತಿದೆ ಎಂಬುದು ಕಂಡುಬಂದಲ್ಲಿ, ಯುಐಡಿಎಐ ಅಥವಾ ಕಾರ್ಡ್‌ದಾರರಿಗೆ 72 ಗಂಟೆಗಳ ಒಳಗೆ ಸಂಸ್ಥೆಗಳು ಮಾಹಿತಿ ನೀಡಬೇಕು. ಬೇರೊಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಪರವಾಗಿ ಆಧಾರ್‌ ಬಳಕೆದಾರರ ಮಾಹಿತಿಯನ್ನು ಸಂಸ್ಥೆಯವರು ಪರಿಶೀಲನೆ ನಡೆಸುವಂತಿಲ್ಲ. ದುರ್ಬಳಕೆಗೆ ಸಂಬಂಧಪಟ್ಟಂತೆ ಯುಐಡಿಎಐ ಅಥವಾ ತನಿಖಾ ಸಂಸ್ಥೆಗಳು ನಡೆಸುವ ತನಿಖೆಗೆ ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.