ಅಖಿಲೇಶ್ ಯಾದವ್
- ಪಿಟಿಐ ಚಿತ್ರ
ಲಖನೌ: ನ್ಯಾಯಯುತ ಚುನಾವಣೆಗಳನ್ನು ನಡೆಸಲು ಮತ್ತು ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ ನಕಲಿ ಮತಗಳನ್ನು ಚಲಾಯಿಸುವುದನ್ನು ತಡೆಯಲು ಆಧಾರ್ ಕಾರ್ಡ್‌ಗಳಿಗೆ ಚಿಪ್ ಅಳವಡಿಸುವುದು ಸೂಕ್ತ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
ಔರೈಯಾ ಜಿಲ್ಲೆಯ ಪ್ರಮುಖ ಪಕ್ಷದ ನಾಯಕರೊಂದಿಗೆ ಚುನಾವಣಾ ಸಿದ್ಧತೆಗಳ ಕುರಿತು ಅಖಿಲೇಶ್ ಯಾದವ್ ಅವರು ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ‘ದೇಶದಾದ್ಯಂತ ಜಾತಿ ಜನಗಣತಿಯನ್ನು ಪ್ರಾರಂಭಿಸಿದರೆ, ಮೀಸಲಾತಿಯನ್ನು ಸರಿಯಾಗಿ ಜಾರಿಗೆ ತರಲಾಗುತ್ತದೆ ಮತ್ತು ‘ಪಿಡಿಎ’ ಅಂದರೆ, ಪಿಚ್ಡೆ (ಹಿಂದುಳಿದ) ಸಮುದಾಯದ ಜನರ ಸಮಸ್ಯೆಗಳನ್ನು ಪರಿಹರಿಸಿದಂತಾಗುತ್ತದೆ’ ಎಂದು ಯಾದವ್ ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಪಿಡಿಎ ಸಮುದಾಯದ ಸದಸ್ಯರ ಕಠಿಣ ಪರಿಶ್ರಮದಿಂದ ನಮ್ಮ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ನೆರವಾಯಿತು. ನಮ್ಮ ಪಕ್ಷವು ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ಪರವಾಗಿದೆ ಎಂದು ಯಾದವ್ ಪುನರುಚ್ಚರಿಸಿದ್ದಾರೆ.
‘ಬಿಜೆಪಿ ಸರ್ಕಾರ ಸಮಾಜದಲ್ಲಿ ದ್ವೇಷವನ್ನು ಹುಟ್ಟುಹಾಕುವ ಮೂಲಕ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವವನ್ನು ದುರ್ಬಲಗೊಳಿಸುತ್ತಿದೆ. ಜತೆಗೆ, ಚುನಾವಣಾ ಆಯೋಗ ಸೇರಿದಂತೆ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ನಾಶಮಾಡಲು ವ್ಯವಸ್ಥಿತ ಪಿತೂರಿಗಳನ್ನು ನಡೆಸಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
‘ನಮ್ಮ ಪಕ್ಷದ ಕಾರ್ಯಕರ್ತರು ಮತದಾರರ ಪಟ್ಟಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ತಮ್ಮ ಬೆಂಬಲಿಗರ ಮತಗಳನ್ನು ಕ್ರೋಢೀಕರಣ ಮಾಡಬೇಕು. ಜತೆಗೆ, ಬೂತ್ ಮಟ್ಟದಿಂದಲೇ ಸಂಘಟನೆಯನ್ನು ಬಲಪಡಿಸುವುದರ ಜತೆಗೆ ಬಿಜೆಪಿಗರ ಸುಳ್ಳುಗಳನ್ನು ಬಹಿರಂಗಪಡಿಸುವ ಕೆಲಸ ಮಾಡಬೇಕು’ ಎಂದು ಯಾದವ್ ಕರೆ ಕೊಟ್ಟಿದ್ದಾರೆ.
2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಮ್ಮ ಪಕ್ಷ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.