ADVERTISEMENT

ಗುರುತಿನ ಪುರಾವೆಗಾಗಿ ಆಧಾರ್‌ ಬಳಕೆ:ಸುಪ್ರೀಂಕೋರ್ಟ್‌ಗೆ ಉತ್ತರಿಸಿದ ಚುನಾವಣಾ ಆಯೋಗ

ಪಿಟಿಐ
Published 15 ನವೆಂಬರ್ 2025, 14:09 IST
Last Updated 15 ನವೆಂಬರ್ 2025, 14:09 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ಬಿಹಾರದ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅಥವಾ ರದ್ದುಪಡಿಸಲು ಆಧಾರ್‌ ಕಾರ್ಡನ್ನು ಗುರುತಿನ ದಾಖಲೆಯಾಗಿ ಬಳಸಲು ಸೂಚಿಸಲಾಗಿದೆಯೇ ಹೊರತು ಪೌರತ್ವದ ಪುರಾವೆಯಾಗಿ ಅಲ್ಲ’ ಎಂದು ಭಾರತದ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೋರ್ಟ್‌ಗೆ ಸಲ್ಲಿಸಿದ ಉತ್ತರದಲ್ಲಿ, ‘ಮತದಾರರ ಪಟ್ಟಿ ಪರಿಷ್ಕರಿಸಲು ಆಧಾರ್ ಬಳಕೆ ಕುರಿತು ನ್ಯಾಯಾಲಯವು ಸೆಪ್ಟೆಂಬರ್ 8ರಂದೇ ಸ್ಪಷ್ಟಪಡಿಸಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆ–1950ರ (ಆರ್‌ಪಿಎ) ಸೆಕ್ಷನ್ 23(4)ರ ಪ್ರಕಾರ ಗುರುತು ಪತ್ತೆ ಮಾಡುವ ಉದ್ದೇಶಕ್ಕಾಗಿ ಆಧಾರ್ ಕಾರ್ಡ್ ಬಳಸಬೇಕೆಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಆಧಾರ್‌ ಕಾರ್ಡ್‌ ಅನ್ನು ಗುರುತಿನ ದಾಖಲೆಯಾಗಿ ಬಳಸಬೇಕು; ಪೌರತ್ವದ ಪುರಾವೆಯಾಗಿ ಅಲ್ಲ ಎಂದು ಆಯೋಗವು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಗೆ ಸೆ.9ರಂದು ಸೂಚನೆ ನೀಡಿತ್ತು’ ಎಂದು ಆಯೋಗ ಹೇಳಿದೆ.

ಆರ್‌ಪಿಎ ಸೆಕ್ಷನ್ 23 ಮತದಾರರ ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆಗೆ ಸಂಬಂಧಿಸಿದೆ.

ADVERTISEMENT

1950ರ ಆರ್‌ಪಿಎ ಸೆಕ್ಷನ್‌ 23(4)ರ ಪ್ರಕಾರ ಗುರುತು ಮತ್ತು ದೃಢೀಕರಣದ ಉದ್ದೇಶಕ್ಕಾಗಿ ಮಾತ್ರ ಆಧಾರ್‌ ಬಳಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತನ್ನ ಉತ್ತರವನ್ನು ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.