ನವದೆಹಲಿ: ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ನಿರ್ದಿಷ್ಟ ತೀರ್ಮಾನಗಳಿಗೆ ಬರಬೇಡಿ ಎಂದು ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಗುರುವಾರ ಹೇಳಿದೆ.
ದುರಂತದ ಬಗ್ಗೆ ತನಿಖೆ ಇನ್ನೂ ಮುಂದುವರೆದಿದೆ. ಘಟನೆಗೆ ಮೂಲ ಕಾರಣ ಕುರಿತ ಅಂತಿಮ ವರದಿ ಹೊರಬರಲಿದೆ ಎಂದಿದೆ.
ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಆಧಾರರಹಿತ ವರದಿಗಳ ಮೂಲಕ ತಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿವೆ. ತನಿಖೆ ನಡೆಯುತ್ತಿರುವಾಗ ಇಂತಹ ಕ್ರಮಗಳು ಬೇಜವಾಬ್ದಾರಿಯಿಂದ ಕೂಡಿವೆ ಎಂದು ಎಎಐಬಿ ಮಹಾನಿರ್ದೇಶಕ ಜಿ.ವಿ.ಜಿ ಯುಗಂಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಪೈಲಟ್‌ಗಳ ದೋಷವೇ ಕಾರಣ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ತನಿಖಾ ಪ್ರಕ್ರಿಯೆಯನ್ನು ಹಾಳುಮಾಡುವ ಇಂತಹ ಆಧಾರ ರಹಿತ ಸುದ್ದಿ ಹರಡದಂತೆ ಸಾರ್ವಜನಿಕರು ಮತ್ತು ಮಾಧ್ಯಮಗಳನ್ನು ಒತ್ತಾಯಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.
ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುವ ಸ್ವಿಚ್‌ಗಳು ‘ಕಟ್ ಆಫ್ ಸ್ಥಿತಿಯಲ್ಲಿ ಇದ್ದವು’ ಮತ್ತು ಇದರಿಂದ ಪೈಲಟ್‌ಗಳು ಗೊಂದಲಕ್ಕೀಡಾಗಿದ್ದರು. ಲೋಪದಿಂದಾಗಿ ವಿಮಾನವು ಟೇಕ್–ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಕೆಳಗಿಳಿಯಲು ಆರಂಭಿಸಿ, ದುರಂತ ಸಂಭವಿಸಿತು ಎಂದು ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿತ್ತು.
ಜೂನ್ 12ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳಲು ಏರ್ ಇಂಡಿಯಾ ವಿಮಾನ (ಬೋಯಿಂಗ್ 787 ಡ್ರೀಮ್‌ಲೈನರ್) ಟೇಕ್–ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘಾನಿನಗರದ ವೈದ್ಯಕೀಯ ಕಾಲೇಜಿನ ಸಂಕೀರ್ಣದಲ್ಲಿದ್ದ ಕಟ್ಟಡಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 241 ಪ್ರಯಾಣಿಕರು, ಸಿಬ್ಬಂದಿ ಹಾಗೂ ಘಟನಾ ಸ್ಥಳದಲ್ಲಿದ್ದ 19 ಮಂದಿ ಮೃತಪಟ್ಟಿದ್ದರು. ಪ್ರಯಾಣಿಕರೊಬ್ಬರು ಅಪಾಯದಿಂದ ಪಾರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.