ಮನೀಶ್ ಸಿಸೋಡಿಯಾ
( ಸಂಗ್ರಹ ಚಿತ್ರ)
ನವದೆಹಲಿ: ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕವನ್ನು ಹೆಚ್ಚಿಸಲು ಬಿಜೆಪಿ ನೇತೃತ್ವದ ದೆಹಲಿ ಸರ್ಕಾರ ಅವಕಾಶ ನೀಡಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ನಾಯಕ, ಮಾಜಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ, ‘ದೆಹಲಿಯ ಶಿಕ್ಷಣ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ‘ಶಿಕ್ಷಣ ಮಾಫಿಯಾ’ಗೆ ಹಸ್ತಾಂತರಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರು ಬಳಲುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಜೌಷಧಗಳು ಲಭ್ಯವಿಲ್ಲ. ಈಗ ಖಾಸಗಿ ಶಾಲೆಗಳು ಶುಲ್ಕವನ್ನು ಹೆಚ್ಚಿಸುವ ಮೂಲಕ ಪೋಷಕರನ್ನು ಲೂಟಿ ಮಾಡುತ್ತಿವೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಲವಾರು ಖಾಸಗಿ ಶಾಲೆಗಳು ಶುಲ್ಕವನ್ನು ಶೇ 20 ರಿಂದ ಶೇ 82ರಷ್ಟು ಹೆಚ್ಚಿಸಿವೆ. ಇದರಿಂದಾಗಿ ಪೋಷಕರು ಚಿಂತಿತರಾಗಿದ್ದಾರೆ. ಶುಲ್ಕವನ್ನು ಪೋಷಕರು ಪಾವತಿಸದಿದ್ದರೆ, ಮಕ್ಕಳಿಗೆ ತರಗತಿಗಳನ್ನು ನಿರಾಕರಿಸಲಾಗುತ್ತಿದೆ. ಆದರೂ, ಬಿಜೆಪಿ ಸರ್ಕಾರ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಆತಿಶಿ, ‘10 ವರ್ಷಗಳಲ್ಲಿ, ದೆಹಲಿಯಲ್ಲಿ ಖಾಸಗಿ ಶಾಲೆಗಳು ಶುಲ್ಕವನ್ನು ಹೆಚ್ಚಿಸಲು ನಾವು (ಎಎಪಿ) ಅವಕಾಶ ನೀಡಿರಲಿಲ್ಲ. ಶಿಕ್ಷಣ ಮಾಫಿಯಾವನ್ನು ನಾವು ಕೊನೆಗೊಳಿಸಿದ್ದೇವು. ಆದರೆ, ಬಿಜೆಪಿ ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳೊಳಗೆ, ಶಿಕ್ಷಣ ಮಾಫಿಯಾ ಮತ್ತೆ ಮರಳಿದೆ. ಇದರಲ್ಲಿ ಬಿಜೆಪಿ ಸರ್ಕಾರ ಭಾಗಿಯಾಗಿದೆಯೇ?’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.