ADVERTISEMENT

ಕೇಜ್ರಿವಾಲ್‌ಗೆ ಕೂಲರ್ ಒದಗಿಸಿಲ್ಲ: ದೆಹಲಿ ಸಚಿವೆ ಆತಿಶಿ

ಪಿಟಿಐ
Published 3 ಜೂನ್ 2024, 15:59 IST
Last Updated 3 ಜೂನ್ 2024, 15:59 IST
<div class="paragraphs"><p>ದೆಹಲಿ ಸಚಿವೆ ಆತಿಶಿ</p></div>

ದೆಹಲಿ ಸಚಿವೆ ಆತಿಶಿ

   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ತಿಹಾರ್ ಜೈಲಿನಲ್ಲಿ ಕೂಲರ್ ಒದಗಿಸಿಲ್ಲ ಮತ್ತು ಕುತಂತ್ರದ ಭಾಗವಾಗಿ ಮೂರು ಬಾರಿ ಅವರ ತೂಕವನ್ನು ಅಳೆಯಲಾಗಿದೆ ಎಂದು ಎಎ‍ಪಿ ಸೋಮವಾರ ಆರೋಪಿಸಿದೆ.

ಮಧ್ಯಂತರ ಜಾಮೀನಿನ ಅವಧಿ ಮುಗಿಸಿ ಕೇಜ್ರಿವಾಲ್ ಮತ್ತೆ ಜೈಲಿಗೆ ಹಿಂದಿರುಗಿದ ಒಂದು ದಿನದ ನಂತರ ಎಎಪಿ ಹಲವು ಆರೋಪಗಳನ್ನು ಮಾಡಿದೆ.

ADVERTISEMENT

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿಯ ಸಚಿವೆ ಆತಿಶಿ, ‘ಭಾನುವಾರ ವೈದ್ಯಕೀಯ ಪರೀಕ್ಷೆಯ ವೇಳೆ ಕೇಜ್ರಿವಾಲ್ ಅವರ ತೂಕವನ್ನು ಮೂರು ಯಂತ್ರಗಳನ್ನು ಬಳಸಿ ಅಳೆಯಲಾಗಿದೆ. ಜೈಲಿನಲ್ಲಿರುವ ಕುಖ್ಯಾತ ಪಾತಕಿಗಳಿಗೆ ಕೂಲರ್‌ಗಳನ್ನು ಒದಗಿಸಲಾಗಿದೆ. ಆದರೆ, ದೆಹಲಿಯಲ್ಲಿ 48 ಡಿಗ್ರಿಯಿಂದ 50 ಡಿಗ್ರಿವರೆಗೆ ಉಷ್ಣಾಂಶವಿದ್ದರೂ ಕೇಜ್ರಿವಾಲ್ ಅವರಿಗೆ ಕೂಲರ್ ಒದಗಿಸಿಲ್ಲ. ಬಿಜೆಪಿ ಮತ್ತು ಎಲ್‌ಜಿ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದಿತ್ತು’ ಎಂದು ಟೀಕಿಸಿದರು.

ಎಎಪಿಯ ಆರೋಪಗಳನ್ನು ತಿಹಾರ್ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ. ‘ಕೇಜ್ರಿವಾಲ್ ಅವರ ತೂಕ 63.5 ಕೆ.ಜಿ. ಭಾನುವಾರ ಜೈಲಿಗೆ ಹಿಂದಿರುಗಿದ ನಂತರ ಒಮ್ಮೆ ಮಾತ್ರ ಅವರ ತೂಕವನ್ನು ಅಳೆಯಲಾಗಿದೆ. ತೂಕದ ಯಂತ್ರದಲ್ಲಿ ಯಾವ ದೋಷವೂ ಇಲ್ಲ. ರಕ್ತದೊತ್ತಡ, ಸಕ್ಕರೆ ಅಂಶ ಸೇರಿದಂತೆ ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.

ನ್ಯಾಯಾಲಯದ ಆದೇಶದ ನಂತರವಷ್ಟೇ ಅವರಿಗೆ ಕೂಲರ್ ಒದಗಿಸಲಾಗುವುದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.