ADVERTISEMENT

ಯೋಗಿ ಆದಿತ್ಯನಾಥ್ ಅವರ ಚುನಾವಣಾ ಪ್ರಚಾರಕ್ಕೆ ತಡೆ ನೀಡುವಂತೆ ಎಎಪಿ ಮನವಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 11:29 IST
Last Updated 2 ಫೆಬ್ರುವರಿ 2020, 11:29 IST
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್   

ನವದೆಹಲಿ: ಶಾಹೀನ್ ಬಾಗ್ ಪ್ರತಿಭಟನೆ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ದೆಹಲಿ ಚುನಾವಣಾಪ್ರಚಾರಕ್ಕೆ ಸಂಪೂರ್ಣ ತಡೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷವು ಚುನಾವಣೆ ಆಯೋಗವನ್ನು ಕೇಳಿದೆ.

ವಾಯುವ್ಯ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಚುನಾವಣಾರ‍್ಯಾಲಿಯೊಂದರಲ್ಲಿ ಪಾಲ್ಗೊಂಡು ಕಾಶ್ಮೀರದಲ್ಲಿ ಉಗ್ರರಿಗೆ ಬೆಂಬಲ ನೀಡುವವರು ಶಾಹೀನ್ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಆಜಾದಿ ಪರವಾಗಿ ಘೋಷಣೆ ಕೂಗುತ್ತಿದ್ದಾರೆ ಎಂದು ಹೇಳಿದ್ದರು. ಈ ವೇಳೆಯಲ್ಲಿಯೇ ಶಾಹೀನ್ ಬಾಗ್ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ವ್ಯಕ್ತಿಯೊಬ್ಬ ಹಿಂದೂಗಳು ಮಾತ್ರವೇ ಆಳ್ವಿಕೆ ನಡೆಸಬೇಕು ಎಂದು ಘೋಷಣೆ ಮೊಳಗಿಸುತ್ತ ಗುಂಡಿನ ದಾಳಿ ನಡೆಸಿದ್ದ.

‘ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶಾಹೀನ್‌ ಬಾಗ್‌ನ ಪ್ರತಿಭಟನಾಕಾರರಿಗೆ ಬಿರಿಯಾನಿ ಪೂರೈಸುತ್ತಿದ್ದಾರೆ’ ಎಂದು ತಮ್ಮ ಭಾಷಣಗಳಲ್ಲಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದರು.

ಬಿಜೆಪಿಯ ಸ್ಟಾರ್ ಪ್ರಚಾರಕರಾಗಿರುವ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಎಎಪಿಯ ಸಂಜಯ್ ಸಿಂಗ್ ಅವರು ದೂರು ದಾಖಲಿಸಿದ್ದು, ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಸಿಂಗ್, ಚುನಾವಣಾಆಯೋಗವನ್ನು ಭೇಟಿ ಮಾಡಲು ಎಎಪಿ ಕಳೆದ 48 ಗಂಟೆಗಳಿಂದಲೂ ಅನುಮತಿ ಕೇಳಿದ್ದರೂ ಕೂಡ ಪ್ರಯೋಜನವಾಗಿಲ್ಲ. ಒಂದು ವೇಳೆ ಚುನಾವಣಾಆಯೋಗವು ನಮಗೆ ಭೇಟಿಗೆ ಅನುಮತಿ ನೀಡಲಿಲ್ಲವಾದರೆ ಚುನಾವಣಾಆಯೋಗದ ಕಚೇರಿ ಮುಂದೆ ಸೋಮವಾರ ಧರಣಿ ಕೂರುವುದಾಗಿತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.