ADVERTISEMENT

ಕೇಜ್ರಿವಾಲ್ ಗೃಹಬಂಧನ: ಆರೋಪ ತಳ್ಳಿ ಹಾಕಿದ ಪೊಲೀಸರು

ಪಿಟಿಐ
Published 8 ಡಿಸೆಂಬರ್ 2020, 6:17 IST
Last Updated 8 ಡಿಸೆಂಬರ್ 2020, 6:17 IST
ದೆಹಲಿ ಮುಖ್ಯಮಂತ್ರಿ ನಿವಾಸದ ಹೊರಗೆ ಎಂಸಿಡಿ ಮೇಯರ್‌ಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರು ಎಎಪಿ ಶಾಸಕ ಅಖಿಲೇಶ್ ಪತಿ ತ್ರಿಪಾಠಿ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ದೆಹಲಿ ಮುಖ್ಯಮಂತ್ರಿ ನಿವಾಸದ ಹೊರಗೆ ಎಂಸಿಡಿ ಮೇಯರ್‌ಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರು ಎಎಪಿ ಶಾಸಕ ಅಖಿಲೇಶ್ ಪತಿ ತ್ರಿಪಾಠಿ ಅವರನ್ನು ಪೊಲೀಸರು ವಶಕ್ಕೆ ಪಡೆದರು.   

ನವದೆಹಲಿ: 'ಪ್ರತಿಭಟನಾನಿರತ ರೈತರನ್ನು ಭೇಟಿಯಾಗಿ ಬಂದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ' ಎಂದು ಆಮ್‌ ಆದ್ಮಿ ಪಕ್ಷದ ವಕ್ತಾರ ಸೌರಭ್‌ ಭಾರದ್ವಾಜ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಜ್ರಿವಾಲ್ ಅವರು ಸೋಮವಾರ ದೆಹಲಿಯ ಸಿಂಘು ಗಡಿಭಾಗಕ್ಕೆ ತೆರಳಿ ಪ್ರತಿಭಟನಾ ನಿರತರನ್ನು ಭೇಟಿಯಾಗಿ ಬಂದ ನಂತರ, ಕೇಂದ್ರ ಗೃಹ ಸಚಿವರ ಆದೇಶದ ಮೇಲೆ ದೆಹಲಿ ಪೊಲೀಸರು ಅವರನ್ನು ಗೃಹಬಂಧನದಲ್ಲಿರಿಸಿದ್ದಾರೆ‘ ಎಂದು ದೂರಿದರು.

‘ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಹೋದ ನಮ್ಮ ಕಾರ್ಯಕರ್ತರು, ಶಾಸಕರನ್ನು ಪೊಲೀಸರು ಥಳಿಸಿದ್ದಾರೆ. ಅವರ ಮನೆಯ ಸುತ್ತಾ ಬ್ಯಾರಿಕೇಡ್ ಹಾಕಿದ್ದಾರೆ. ಕೇಜ್ರಿವಾಲ್ ಅವರ ಮನೆಗೆಲಸದ ವರನ್ನೂ ಪೊಲೀಸರು, ಮನೆಯೊಳಗೆ ಹೋಗಲು ಬಿಡುತ್ತಿಲ್ಲ‘ ಎಂದು ದೂರಿದರು.

ADVERTISEMENT

‘ಈ ಹಿನ್ನೆಲೆಯಲ್ಲಿ ನಾವು ಮುಖ್ಯಮಂತ್ರಿಯವರನ್ನು ಗೃಹಬಂಧನದಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಲು ಅವರ ಮನೆಯತ್ತ ತೆರಳುತ್ತಿದ್ದೇವೆ‘ ಎಂದು ಸೌರಬ್‌ ಹೇಳಿದರು.

ಆಪ್ ವಕ್ತಾರರ ಆರೋಪವನ್ನು ನಿರಾಕರಿಸಿದ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ, ‘ಇದೆಲ್ಲ ಸುಳ್ಳು. ಮುಖ್ಯಮಂತ್ರಿಯವರು ಎಲ್ಲಿಗೆ ಬೇಕಾದರೂ ಹೋಗಿ ಬರಬಹುದು. ಅವರಿಗೆ ಭದ್ರತೆ ನೀಡುವ ದೃಷ್ಟಿಯಿಂದ ನಮ್ಮ ಸಿಬ್ಬಂದಿಯನ್ನು ಅವರ ನಿವಾಸದ ಹೊರಗೆ ನಿಯೋಜಿಸಲಾಗಿದೆ. ನಿನ್ನೆ ಸಂಜೆ ಕೂಡ ಅವರು ಹೊರಗೆ ಓಡಾಡಿದ್ದಾರೆ‘ ಎಂದು ಸ್ಪಷ್ಟಪಡಿಸಿದರು.

‘ಜನರ ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ.ಬಿಜೆಪಿ ಮತ್ತು ಎಎಪಿ ಪಕ್ಷದ ಕಾರ್ಯಕರ್ತರ ನಡುವೆ ನಡೆಯಬಹುದಾದ ಘರ್ಷಣೆ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಮುಖ್ಯಂಮತ್ರಿಯವರ ಮನೆಯ ಸುತ್ತಾ ನಮ್ಮ ತಂಡಗಳನ್ನು ನಿಯೋಜಿಸಿದ್ದೇವೆ‘ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.