ADVERTISEMENT

ಮತಯಂತ್ರಗಳ ಕೊಠಡಿಗೆ ಕಾರ್ಯಕರ್ತರನ್ನು ಕಾವಲಿಟ್ಟ ಕೇಜ್ರಿವಾಲ್

ಏಜೆನ್ಸೀಸ್
Published 10 ಫೆಬ್ರುವರಿ 2020, 0:55 IST
Last Updated 10 ಫೆಬ್ರುವರಿ 2020, 0:55 IST
ಆಮ್ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್
ಆಮ್ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್   

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಬ್ಬರದ ಪ್ರಚಾರವೂ ಆಯಿತು, ಶನಿವಾರ ಮತದಾನವೂ ನಡೆಯಿತು. ಈಗ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಆದರೆ, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಶನಿವಾರ ತಡರಾತ್ರಿಯವರೆಗೂ ಸಭೆ ನಡೆಸಿ ಮತಯಂತ್ರಗಳನ್ನು ಇರಿಸಿರುವ ಭದ್ರತಾ ಕೊಠಡಿಗಳ ಸುತ್ತ ಕಾವಲು ಕಾಯಲು ಪಕ್ಷದ ಸ್ವಯಂಸೇವಕರನ್ನು ನಿಯೋಜಿಸಲು ತೀರ್ಮಾನಿಸಿದ್ದಾರೆ.

ದೆಹಲಿಯಲ್ಲಿ 30 ಭದ್ರತಾ ಕೊಠಡಿಗಳಲ್ಲಿ ಮತಯಂತ್ರಗಳನ್ನು ಇರಿಸಲಾಗಿದೆ. ಇವುಗಳಲ್ಲಿ ದೆಹಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ADVERTISEMENT

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರಾದ ಸಂಜಯ್ ಸಿಂಗ್ , ಮನಿಷ್ ಸಿಸೋಡಿಯಾ, ಪ್ರಶಾಂತ್ ಕಿಶೋರ್ ಸೇರಿದಂತೆ ಹಲವು ಮುಖಂಡರ ಜೊತೆ ಸಭೆ ನಡೆಸಿ ಭದ್ರತಾ ಕೊಠಡಿಯ ಸುತ್ತಮುತ್ತ ಸ್ವಯಂ ಸೇವಕರನ್ನು ನಿಯೋಜಿಸುವತೀರ್ಮಾನಕ್ಕೆ ಬಂದಿದ್ದಾರೆ. ಸ್ವಯಂ ಸೇವಕರು ಮಂಗಳವಾರ ಬೆಳಗಿನವರೆಗೂ ಪಾಳಿಯಲ್ಲಿ ಗಸ್ತು ತಿರುಗುವಂತೆ ನಿಯೋಜಿಸಲು ತೀರ್ಮಾನಿಸಲಾಯಿತು ಎನ್ನಲಾಗಿದೆ.

ಕೆಲವರು ಬಬಾರ್ಪುರ್ ಎಂಬಲ್ಲಿ ಇವಿಎಂ ಯಂತ್ರದಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಕೇಳಿದ್ದೇವೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಮುಖಂಡ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಲ್ಲದೆ, ಪಕ್ಷದಲ್ಲಿರುವ ಸ್ವಯಂ ಸೇವಕರು ದೆಹಲಿಯಲ್ಲಿ ಮತಯಂತ್ರಗಳನ್ನು ಇರಿಸಿರುವ 30 ಕೊಠಡಿಗಳ ಸುತ್ತ ಕಾವಲು ಕಾಯಲಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

ಶನಿವಾರ ಮತದಾನ ನಡೆದಿದ್ದು, ಫೆ.11ರ ಮಂಗಳವಾರ ಮತಎಣಿಕೆ ನಡೆಯಲಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷ 59ರಿಂದ 68 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ 5 ರಿಂದ 19 ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.