ADVERTISEMENT

ಗುಜರಾತ್‌: ಕುಟುಂಬ ಸಮೇತ ಕಾಣೆಯಾಗಿದ್ದ ಎಎಪಿ ಅಭ್ಯರ್ಥಿ ಪ್ರತ್ಯಕ್ಷ, ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ನವೆಂಬರ್ 2022, 16:17 IST
Last Updated 16 ನವೆಂಬರ್ 2022, 16:17 IST
ಕಾಂಚನ್‌ ಜರಿವಾಲ (ಟ್ವಿಟಿರ್ ಚಿತ್ರ)
ಕಾಂಚನ್‌ ಜರಿವಾಲ (ಟ್ವಿಟಿರ್ ಚಿತ್ರ)   

ನವದೆಹಲಿ: ಕುಟುಂಬ ಸಮೇತ ಕಾಣೆಯಾಗಿದ್ದ ಗುಜರಾತ್‌ನ ಪೂರ್ವ ಸೂರತ್‌ನ ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಕಾಂಚನ್‌ ಜರಿವಾಲ ಅವರು ಬುಧವಾರ ಪ್ರತ್ಯಕ್ಷರಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಎಪಿ ಪಕ್ಷದ ಕಾರ್ಯಕರ್ತರು ಹಣಕ್ಕಾಗಿ ಬೇಡಿಕೆಯಿಟ್ಟಿದ್ದರಿಂದ ನಾಮಪತ್ರ ಹಿಂಪಡೆದಿದ್ದೇನೆ’ ಎಂದು ತಿಳಿಸಿದ್ದಾರೆ.

‘ಎಎಪಿ ಕಾರ್ಯಕರ್ತರು ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದರು. ಹಾಗಾಗಿ ನಾನು ₹80 ಲಕ್ಷದಿಂದ ₹1 ಕೋಟಿ ಖರ್ಚು ಮಾಡುವಷ್ಟು ಸಾಮರ್ಥ್ಯ ಹೊಂದಿಲ್ಲ. ನಾನು ನಾಮಪತ್ರ ಹಿಂಪಡೆದ ಬೆನ್ನಲ್ಲೇ ಪೂರ್ವ ಸೂರತ್ ಕ್ಷೇತ್ರದಲ್ಲಿ ಎಎಪಿ ಕಾರ್ಯಕರ್ತರು ರಾಜೀನಾಮೆ ನೀಡಲು ಮುಂದಾಗಿದ್ದಾರೆ’ ಎಂದು ಜರಿವಾಲ ಹೇಳಿದ್ದಾರೆ.

ADVERTISEMENT

‘ಪಕ್ಷದ ಕಡೆಯಿಂದ ಸಾಕಷ್ಟು ಒತ್ತಡವಿತ್ತು. ಜನ ಪದೇ ಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಮಗನ ಗೆಳೆಯರೊಂದಿಗೆ ಹೊರಟು ಹೋಗಿದ್ದೆ. ನಮ್ಮೊಂದಿಗೆ ಬಿಜೆಪಿಯವರು ಯಾರೂ ಇರಲಿಲ್ಲ. ಮುಂದೆ ಏನು ಮಾಡಬೇಕು ಎಂಬುದನ್ನು ಅದಷ್ಟು ಬೇಗ ತಿಳಿಸುತ್ತೇನೆ’ ಎಂದಿದ್ದಾರೆ.

ಬಿಜೆಪಿಯ ಅಣತಿಯಂತೆ ನಮ್ಮ ಪಕ್ಷದ ಅಭ್ಯರ್ಥಿ ಕಾಂಚನ್‌ ಜರಿವಾಲ ಅವರನ್ನು ಅಪಹರಿಸಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದರು. ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಈ ಕೃತ್ಯ ನಡೆಸಿದೆ ದೂರಿದ್ದರು.

ಈ ಚುನಾವಣೆಯಲ್ಲಿ ಬಿಜೆಪಿ ಗುಜರಾತ್‌ ಅನ್ನು ಕಳೆದುಕೊಳ್ಳಲಿದೆ. ಹಾಗಾಗಿ ನಮ್ಮ ಪೂರ್ವ ಸೂರತ್‌ನ ಅಭ್ಯರ್ಥಿಯನ್ನು ಅಪಹರಿಸುವಷ್ಟು ಕೆಳಮಟ್ಟಕ್ಕೆ ಬಿಜೆಪಿ ಇಳಿದಿದೆ. ಸೋಲಿನ ಭಯದಿಂದ ಬಿಜೆಪಿ ಗೂಂಡಾಗಳು ಕಾಂಚನ್‌ ಜರಿವಾಲ ಅವರನ್ನು ಅಪಹರಿಸಿದ್ದಾರೆ ಎಂದು ದೆಹಲಿಯಲ್ಲಿ ಸಿಸೋಡಿಯಾ ವಾಗ್ದಾಳಿ ನಡೆಸಿದ್ದರು.

ಇದು ನಮ್ಮ ಅಭ್ಯರ್ಥಿಯ ಅಪಹರಣ ಮಾತ್ರವಲ್ಲ, ಇದು ಪ್ರಜಾಪ್ರಭುತ್ವದ ಅಪಹರಣ. ಗುಜರಾತ್‌ನಲ್ಲಿ ತುಂಬಾ ಅಪಾಯಕರ ಸ್ಥಿತಿ ಇದೆ. ಇದನ್ನು ಚುನಾವಣೆ ಆಯೋಗವು ಗಂಭೀರವಾಗಿ ಪರಿಗಣಿಸಬೇಕು ಎಂದು ಸಿಸೋಡಿಯಾ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.