ಯೋಗೇಂದ್ರ ಯಾದವ್
ನವದೆಹಲಿ: ‘ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸೋಲು, ಕೇವಲ ಆ ಪಕ್ಷದ ಸೋಲಲ್ಲ. ಅದು ಇಡೀ ‘ಇಂಡಿಯಾ’ ಮೈತ್ರಿಕೂಟದ್ದೇ ಸೋಲು. ಈ ಫಲಿತಾಂಶವು ಎಎಪಿಯ ಭವಿಷ್ಯದ ಕುರಿತು ಪ್ರಶ್ನೆ ಎತ್ತುತ್ತಿದೆ. ಎಎಪಿ ಈಗ ಪಂಜಾಬ್‌ಗೆ ಮಾತ್ರವೇ ಸೀಮಿತವಾಗಲಿದೆ’ ಎಂದು ಎಎಪಿ ಸ್ಥಾಪಕರಲ್ಲಿ ಒಬ್ಬರಾಗಿದ್ದ ಯೋಗೇಂದ್ರ ಯಾದವ್ ಅಭಿಪ್ರಾಯಪಟ್ಟರು.
ಯೋಗೇಂದ್ರ ಯಾದವ್ ಅವರನ್ನು 2015ರಲ್ಲಿಯೇ ಎಎಪಿಯಿಂದ ಹೊರಹಾಕಲಾಗಿತ್ತು. ‘10–12 ವರ್ಷಗಳ ಹಿಂದೆ ಪರ್ಯಾಯ ರಾಜಕಾರಣ ಸ್ಥಾಪಿಸಬೇಕು ಎಂದು ಕನಸು ಕಂಡಿದ್ದ ಎಲ್ಲರ ಸೋಲಿದು. ಎಎಪಿಯನ್ನು ಬೆಂಬಲಿಸಿದ ಪಕ್ಷಗಳು ಮತ್ತು ಇಡೀ ವಿರೋಧ ಪಕ್ಷಗಳ ಸೋಲು ಇದಾಗಿದೆ’ ಎಂದರು.
‘ಮತಪ್ರಮಾಣದಲ್ಲಿ ಬಿಜೆಪಿಗಿಂತ ಶೇ 4–5ರಷ್ಟು ಮಾತ್ರವೇ ಹಿಂದೆ ಇದ್ದೇವೆ ಎಂದು ಎಎಪಿ ಹೇಳಿಕೊಳ್ಳಬಹುದು. ಆದರೆ, ಕೇಜ್ರಿವಾಲ್ ಹಾಗೂ ಮನೀಷ್ ಸಿಸೋಡಿಯಾರಂಥ ಇಬ್ಬರು ನಾಯಕರು ಸೋತಿದ್ದಾರೆ. ಎಷ್ಟೆಲ್ಲಾ ಪ್ರಯತ್ನಗಳ ಬಳಿಕವೂ ಈ ಇಬ್ಬರು ಸೋಲು ಕಂಡಿದ್ದಾರೆ. ಇದು ಪಕ್ಷದ ಭಾರಿ ಹಿನ್ನಡೆ’ ಎಂದು ವಿಶ್ಲೇಷಿಸಿದರು.
‘ಇವರು ಗುಜರಾತ್‌ನಲ್ಲಿಯೂ ಗೆಲ್ಲುವುದಿಲ್ಲ. ಇವರಿಗೆ ಉಳಿದಿರುವುದು ಪಂಜಾಬ್ ಮಾತ್ರ. ಬಿಜೆಪಿಯವರು ಪಂಜಾಬ್‌ನಲ್ಲಿ ಎಎಪಿಯನ್ನು ಒಡೆಯುವ ಯತ್ನ ನಡೆಸುತ್ತಾರೆ. ದೆಹಲಿಯ ಗದ್ದುಗೆ ಏರಿದ ಬಳಿಕ ಎಎಪಿ, ದೇಶದಲ್ಲಿ ಪರ್ಯಾಯ ರಾಜಕಾರಣವನ್ನೇನೋ ನೀಡಿತ್ತು ನಿಜ. ಆದರೆ, ಅದು ಕಲ್ಯಾಣ ಯೋಜನೆಗಳಿಗೆ ಮಾತ್ರವೇ ಸೀಮಿತಗೊಂಡಿತು. ಈಗಂತೂ ಅದು ಸಾಕು ಎನ್ನಿಸುವ ಮಟ್ಟವನ್ನು ತಲುಪಿತ್ತು’ ಎಂದರು.
‘ಸಮಾಜವಾದಿ ಪಕ್ಷ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ಕೆಲವು ಪ್ರಮುಖ ಪಕ್ಷಗಳು ಎಎಪಿ ಪರ ಪ್ರಚಾರ ನಡೆಸಿದವು. ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ ಎನ್ನುವುದಕ್ಕೆ ಇದು ಸಾಕ್ಷಿ. ಒಂದು ವೇಳೆ ಕಾಂಗ್ರೆಸ್ ಮತ್ತು ಎಎಪಿ ಈ ಬಾರಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದ್ದರೂ ಈ ಮೈತ್ರಿಯೂ ಹೆಚ್ಚು ಕಾಲ ಉಳಿಯುತ್ತಿರಲಿಲ್ಲ’ ಎಂದರು.
‘ಕೇಜ್ರಿವಾಲ್ ಬೆಂಬಲಿಸದ ಮೋದಿ ಬೆಂಬಲಿಗರು’
‘ಮೋದಿ ಅವರ ಬೆಂಬಲಿಗರ ಮತಗಳು ಲೋಕಸಭೆಯಲ್ಲಿ ಮೋದಿ ಅವರಿಗೆ ವಿಧಾನಸಭೆಯಲ್ಲಿ ಕೇಜ್ರಿವಾಲ್ ಅವರಿಗೆ ಬೀಳುತ್ತಿದ್ದವು. ಆದರೆ ಈ ಬಾರಿ ಹಾಗಾಗಲಿಲ್ಲ. ಅಬಕಾರಿ ನೀತಿ ಹಗರಣ ‘ಶೇಷ್ ಮಹಲ್’ ವಿಚಾರಗಳ ಕಾರಣ ಮೋದಿ ಬೆಂಬಲಿಗರು ಕೇಜ್ರಿವಾಲ್ ಅವರಿಗೆ ಮತ ನೀಡಲಿಲ್ಲ’ ಎಂದು ಯೋಗೇಂದ್ರ ಯಾದವ್ ಅಭಿಪ್ರಾಯಪಟ್ಟರು. ‘ಲೆಫ್ಟಿನೆಂಟ್ ಗವರ್ನರ್ ಹಾಗೂ ಕೇಂದ್ರ ಸರ್ಕಾರದೊಂದಿಗೆ ಪ್ರತಿನಿತ್ಯ ಜಗಳ. ಇದರಿಂದ ದೆಹಲಿಯ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಲಾಯಿತು. ಈ ಕಾರಣದಿಂದಲೇ ಮೋದಿ ಬೆಂಬಲಿಗರು ವಿಧಾನಸಭೆ ಚುನಾವಣೆಯಲ್ಲಿಯೂ ಮೋದಿ ಅವರಿಗೆ ಬೆಂಬಲ ನೀಡಿದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.