ADVERTISEMENT

ಇ–ತರಗತಿಗೆ ಹಿನ್ನಡೆ | ಶೇ 56ರಷ್ಟು ಮಕ್ಕಳಲ್ಲಿ ಸ್ಮಾರ್ಟ್‌ಫೋನ್‌ ಇಲ್ಲ

ಎನ್‌ಜಿಒಯಿಂದ ಸಮೀಕ್ಷೆ, 42,831 ವಿದ್ಯಾರ್ಥಿಗಳು ಭಾಗಿ

ಪಿಟಿಐ
Published 13 ಜೂನ್ 2020, 11:15 IST
Last Updated 13 ಜೂನ್ 2020, 11:15 IST
ಆನ್‌ಲೈನ್‌ ತರಗತಿಯಲ್ಲಿರುವ ವಿದ್ಯಾರ್ಥಿಗಳು– ಸಾಂದರ್ಭಿಕ ಚಿತ್ರ
ಆನ್‌ಲೈನ್‌ ತರಗತಿಯಲ್ಲಿರುವ ವಿದ್ಯಾರ್ಥಿಗಳು– ಸಾಂದರ್ಭಿಕ ಚಿತ್ರ   

ನವದೆಹಲಿ: ಆನ್‌ಲೈನ್‌ ತರಗತಿಯಲ್ಲಿ ಭಾಗಿಯಾಗಲು ಪ್ರಾಥಮಿಕವಾಗಿ ಅಗತ್ಯವಿರುವ ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿ ಶೇ 56ರಷ್ಟು ಮಕ್ಕಳಲ್ಲಿ ಇಲ್ಲ ಎಂಬ ಅಂಶ ಸಮೀಕ್ಷೆಯಿಂದ ತಿಳಿದುಬಂದಿದೆ. ವಿವಿಧ ಶಾಲಾ ಹಂತದ 42,831 ವಿದ್ಯಾರ್ಥಿಗಳು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು.

ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಸೇವಾ ಸಂಸ್ಥೆ ಸ್ಮೈಲ್‌ ಫೌಂಡೇಷನ್‌ ‘ಕೋವಿಡ್‌ –19 ಚಿತ್ರಣ: ವಾಸ್ತವ ಸ್ಥಿತಿ ಮತ್ತು ಪರಿಹಾರ’ ಶೀರ್ಷಿಕೆಯಡಿ ಈ ಸಮೀಕ್ಷೆ ನಡೆಸಿತ್ತು.

ಅದರ ಪ್ರಕಾರ, ಸಮೀಕ್ಷೆಯಲ್ಲಿ ಭಾಗಿಯಾದವರಲ್ಲಿ ಶೇ 43.99 ಮಕ್ಕಳಲ್ಲಿ ಸ್ಮಾರ್ಟ್‌ ಫೋನ್‌ ಇದ್ದರೆ, ಉಳಿದಂತೆ ಇಷ್ಟೇ ಪ್ರಮಾಣದ ಮಕ್ಕಳು ಬೇಸಿಕ್‌ ಫೀಚರ್‌ ಫೋನ್ ಅಷ್ಟೇ ಹೊಂದಿದ್ದಾರೆ. ಶೇ 12.02 ರಷ್ಟು ಮಕ್ಕಳಲ್ಲಿ ಯಾವುದೇ ಬಗೆಯ ಫೋನ್‌ಗಳು ಇಲ್ಲ.

ADVERTISEMENT

ಶೇ 56.01 ರಷ್ಟು ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್ ಸೌಲಭ್ಯದಿಂದ ದೂರವಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ‌.

ಇನ್ನು ಟೆಲಿವಿಷನ್‌ ಸೌಲಭ್ಯ ಶೇ 68.99ರಷ್ಟು ಮಕ್ಕಳಿಗೆ ಇದೆ. ಆದರೆ ಉಳಿದ ಶೇ 31.01 ರಷ್ಟು ಮಕ್ಕಳಿಗೆ ಈ ಸೌಲಭ್ಯವಿಲ್ಲ.

ಪ್ರಾಥಮಿಕ ಹಂತದಲ್ಲಿ (5ನೇ ತರಗತಿವರೆಗೆ) 19,576 ಮಕ್ಕಳು, ಮಾಧ್ಯಮಿಕ ಹಂತದ (6 ರಿಂದ 8ನೇ ತರಗತಿ) 12,277 ಮಕ್ಕಳು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಪ್ರೌಢ ಶಿಕ್ಷಣ ಹಂತದಲ್ಲಿ (9 ಮತ್ತು 10ನೇ ತರಗತಿ) 5,537 ಮಕ್ಕಳು ಭಾಗಿಯಾಗಿದ್ದು, ಪದವಿ ಪೂರ್ವ ಹಂತದ (11 ಮತ್ತು 12ನೇ ತರಗತಿ) 3,216 ಮಕ್ಕಳು ಸಮೀಕ್ಷೆಗೆ ಪ್ರತಿಕ್ರಿಯಿಸಿದ್ದರು.

ಎರಡು ಮಾರ್ಗದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು. ಎನ್‌ಜಿಒ ತನ್ನ ಬಳಿಯಿದ್ದ ಮಾಹಿತಿ ಆಧರಿಸಿ ಟೆಲಿಫೋನ್ ಮೂಲಕ ನಡೆಸಿತು. ಎರಡನೇ ಕ್ರಮದಲ್ಲಿ ಸಮುದಾಯದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಶ್ನೋತ್ತರ ಮೂಲಕ ಮಾಹಿತಿಯನ್ನು ಸಂಗ್ರಹಿಸಿದರು.

ಕರ್ನಾಟಕ ಸೇರಿದಂತೆ ಒಟ್ಟು 23 ರಾಜ್ಯಗಳಲ್ಲಿ ಸಮೀಕ್ಷೆಯು ಏಪ್ರಿಲ್ಲ್‌ 16 ರಿಂದ 28ರವರೆಗೂ 12 ದಿನ ನಡೆದಿತ್ತು.

ಅಧಿಕೃತ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 35 ಕೋಟಿ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಎಷ್ಟು ಮಂದಿ ವಿದ್ಯಾರ್ಥಿಗಳು ಡಿಜಿಟಲ್‌ ಪರಿಕರ ಹಾಗೂ ಇಂಟರ್‌ನೆಟ್‌ ಸೌಲಭ್ಯ ಹೊಂದಿದ್ದಾರೆ ಎಂಬುದರ ಮಾಹಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.