ADVERTISEMENT

ಮಹಾರಾಷ್ಟ್ರ| ಸ್ವಾಮೀಜಿ ಹತ್ಯೆ ಆರೋಪಿ ಸೆರೆ

ಪಿಟಿಐ
Published 24 ಮೇ 2020, 15:42 IST
Last Updated 24 ಮೇ 2020, 15:42 IST
ಸ್ವಾಮೀಜಿ ಮತ್ತು ಆರೋಪಿ ಸಾಯಿನಾಥ್‌ ಲಿಂಗಾಡೆ
ಸ್ವಾಮೀಜಿ ಮತ್ತು ಆರೋಪಿ ಸಾಯಿನಾಥ್‌ ಲಿಂಗಾಡೆ    

ಔರಂಗಾಬಾದ್‌: ನಾಂದೇಡ್ ಜಿಲ್ಲೆಯ ನಾಗಠಾಣದಲ್ಲಿ ಕರ್ನಾಟಕ ಮೂಲದ ಸ್ವಾಮೀಜಿಯನ್ನು ಕೊಂದ ಹಂತಕನನ್ನು ಮಹಾರಾಷ್ಟ್ರ ಪೊಲೀಸರು ತೆಲಂಗಾಣದಲ್ಲಿ ಬಂಧಿಸಿದ್ದಾರೆ.

‘ಕೊಲೆ ಆರೋಪಿ ಸಾಯಿನಾಥ್ ಲಿಂಗಾಡೆ ಎಂಬಾತನನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ತೆಲಂಗಾಣ ಗಡಿಯಲ್ಲಿ ಬಂಧಿಸಲಾಗಿದೆ,’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಜಯಕುಮಾರ್‌ ಮಾಗರ್‌ ತಿಳಿಸಿದ್ದಾರೆ.

ADVERTISEMENT

ನಾಂದೇಡ್‌ ಜಿಲ್ಲೆಯ ಉಮರಿ ತಾಲ್ಲೂಕಿನ ನಾಗಠಾಣದ ನಿರ್ವಾಣಿ ಮಠದ ಪೀಠಾಧಿಪತಿರುದ್ರಪಶುಪತಿ ಶಿವಾಚಾರ್ಯ ಮಹಾರಾಜ ಸ್ವಾಮೀಜಿ (33) ಹಾಗೂ ಅವರ ಸೇವಕ ಭಗವಾನ್‌ ಶಿಂಧೆ (55)ಯವರನ್ನು ಸಾಯಿನಾಥ್‌ ಲಿಂಗಾಡೆ ಕೊಂದಿದ್ದ.

‘ಲ್ಯಾಪ್‌ಟಾಪ್‌ ಹಾಗೂ ₹ 70 ಸಾವಿರ ನಗದು ದೋಚಿದ ನಂತರ ಆರೋಪಿ ಲಿಂಗಾಡೆ ಈ ಕೃತ್ಯ ಎಸಗಿದ್ದಾನೆ. ಹಲವಾರು ಅಪರಾಧಗಳನ್ನು ಎಸಗಿರುವ ಹಿನ್ನೆಲೆಯಿರುವ ಆರೋಪಿ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅತನ ವಿರುದ್ಧ ಕೊಲೆ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣಗಳು ಈ ಹಿಂದೆ ದಾಖಲಾಗಿದ್ದವು’ ಎಂದು ಮಾಗರ್‌ ತಿಳಿಸಿದ್ದಾರೆ.

‘ಆಶ್ರಮದ ಬಳಿಯೇ ಜಿಲ್ಲಾ ಪರಿಷತ್‌ ಶಾಲೆಯಿದ್ದು, ಅಲ್ಲಿಯೇ ಸಾಯಿನಾಥ್ ಮತ್ತು ಶಿಂಧೆ ಭೇಟಿಯಾಗಿದ್ದಾರೆ. ಆಗ ಶಿಂಧೆಯನ್ನು ಹತ್ಯೆ ಮಾಡಿರುವ ಲಿಂಗಾಡೆ, ಶವವನ್ನು ಶೌಚಾಲಯದಲ್ಲಿ ಎಸೆದಿದ್ದಾನೆ. ನಂತರ ಆಶ್ರಮಕ್ಕೂ ತೆರಳಿ, ಸಾಧು ಶಿವಾಚಾರ್ಯ ಮಹಾರಾಜ್‌ ಅವರನ್ನು ಕೊಂದಿರುವ ಸಾಧ್ಯತೆ ಇದೆ’ ಎಂದು ವಿವರಿಸಿದ್ದಾರೆ.

‘ಸಾಧು ಅವರ ಮೃತದೇಹವನ್ನು ಕಾರಿನಲ್ಲಿಟ್ಟುಕೊಂಡು, ಪರಾರಿಯಾಗಲು ಯತ್ನಿಸುವ ವೇಳೆ, ಕಾರು ಆಶ್ರಮದ ಗೇಟಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಸುತ್ತಮುತ್ತಲಿನ ಜನರು ಎಚ್ಚರಗೊಂಡು, ಆಶ್ರಮದತ್ತ ದೌಡಾಯಿಸಿದ್ದಾರೆ. ಅಷ್ಟರೊಳಗೆ, ಸಾಧು ಅವರ ಶವವನ್ನು ಕಾರಿನಲ್ಲಿಯೇ ಬಿಟ್ಟ ಆರೋಪಿ, ಬೈಕ್‌ನಲ್ಲಿ ಪರಾರಿಯಾಗಿದ್ದಾನೆ’ ಎಂದೂ ಹೇಳಿದ್ದಾರೆ.

ಆಘಾತಕಾರಿ: ಸಾಧು ಸೇರಿ ಇಬ್ಬರ ಹತ್ಯೆ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌, ‘ಸಾಧು ಮತ್ತು ಇನ್ನೊಬ್ಬ ವ್ಯಕ್ತಿಯ ಬರ್ಬರ ಹತ್ಯೆ ಆಘಾತಕಾರಿ ಮತ್ತು ನೋವವನ್ನುಂಟು ಮಾಡಿದೆ’ ಎಂದು ಹೇಳಿದ್ದಾರೆ.

‘ಈ ಕೃತ್ಯಕ್ಕೆ ಸಂಬಂಧಿಸಿ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ, ಶಿಕ್ಷಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.