ADVERTISEMENT

ತಪ್ಪಾಗಿದ್ದರೆ ಕ್ಷಮೆ, ತಪ್ಪಿಲ್ಲದಿದ್ದರೆ ಕ್ಷಮೆ ಕೇಳಲ್ಲ: ಕಮಲ್‌ ಹಾಸನ್‌

ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂದು ಹೇಳಿ ಕನ್ನಡಿಗರಿಂದ ಛೀಮಾರಿಗೆ ಒಳಗಾಗಿರುವ ನಟ ಕಮಲ್ ಹಾಸನ್ ಅವರು ತಮ್ಮ ಹಠಮಾರಿ ಧೋರಣೆಯನ್ನು ಮುಂದುವರೆಸಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮೇ 2025, 9:33 IST
Last Updated 30 ಮೇ 2025, 9:33 IST
<div class="paragraphs"><p> ಕಮಲ್ ಹಾಸನ್</p></div>

ಕಮಲ್ ಹಾಸನ್

   

ಬೆಂಗಳೂರು: ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂದು ಹೇಳಿ ಕನ್ನಡಿಗರಿಂದ ಹಾಗೂ ಹಲವು ಭಾಷಾ ತಜ್ಞರಿಂದ ಛೀಮಾರಿಗೆ ಒಳಗಾಗಿರುವ ನಟ ಕಮಲ್ ಹಾಸನ್ ಅವರು ತಮ್ಮ ಹಠಮಾರಿ ಧೋರಣೆಯನ್ನು ಮುಂದುವರೆಸಿದ್ದಾರೆ.

‘ನಾನು ಹೇಳಿದ್ದು ಸರಿ ಅಲ್ಲ ಎಂದು ಸಾಬೀತಾಗುವವರೆಗೂ ನಾನು ಯಾರ ಕ್ಷಮೆ ಕೇಳುವುದಿಲ್ಲ’ ಎಂದು ಇಂದು ಚೆನ್ನೈನಲ್ಲಿ ಸುದ್ದಿಗಾರರ ಎದುರು ನಟ ಹಾಗೂ ರಾಜಕಾರಣಿಯೂ ಆಗಿರುವ ಕಮಲ್ ಹೇಳಿದ್ದಾರೆ.

ADVERTISEMENT

ಇದು ಪ್ರಜಾಪ್ರಭುತ್ವ. ನಾನು ಸಂವಿಧಾನ ಮತ್ತು ಕಾನೂನಿನಲ್ಲಿ ನಂಬಿಕೆಯುಳ್ಳವನು. ನನ್ನ ಪ್ರೀತಿ ಕರ್ನಾಟಕಕ್ಕೆ, ಕನ್ನಡಕ್ಕೆ, ತೆಲುಗು, ಮಲಯಾಳಂಗೆ ಇದ್ದೇ ಇದೆ. ಅಜೆಂಡಾ ಇಟ್ಟು ರಾಜಕಾರಣ ಮಾಡುವವರನ್ನು ಹೊರತುಪಡಿಸಿ ಯಾರೂ ಇದನ್ನು ಅಲ್ಲಗಳೆಯುವುದಿಲ್ಲ ಎಂದು ಹೇಳಿದ್ದಾರೆ.

ವಿರೋಧಗಳು ಈ ಹಿಂದೆಯೂ ಸಾಕಷ್ಟು ಬಂದಿವೆ. ಒಂದು ವೇಳೆ ನಾನು ತಪ್ಪಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಇಲ್ಲದಿದ್ದರೇ ಇಲ್ಲ. ಕನ್ನಡದ ವಿಷಯದಲ್ಲಿ ನಾನು ಹೇಳಿರುವುದು ಸರಿ ಅಲ್ಲ ಎಂದು ಎನ್ನುವವರೆಗೂ ನಾನು ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಅವರ ಹೇಳಿಕೆಗೆ ಕನ್ನಡ ನಾಡಿನಿಂದ ತೀವ್ರ ವಿರೋಧಗಳು ಮುಂದುವರೆದಿವೆ. ಕ್ಷಮೆ ಕೇಳಬೇಕು ಎಂದು ಹಲವರು ಹೇಳಿದಾಗಲೂ ಕಮಲ್ ತಮ್ಮ ಹಠಮಾರಿ ಧೋರಣೆಯನ್ನು ಮುಂದುವರೆಸಿರುವುದು ಇಂದು ನೀಡಿರುವ ಅವರ ಹೇಳಿಕೆಯಿಂದ ಸಾಬೀತಾಗುತ್ತದೆ.

ಇನ್ನೊಂದೆಡೆ ಕಮಲ್‌ ಹಾಸನ್‌ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕರ್ನಾಟಕದಲ್ಲಿ ಅವರ ‘ಥಗ್‌ ಲೈಫ್‌’ ಚಿತ್ರ ಬಿಡುಗಡೆಗೆ ಅವಕಾಶವಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಈಗಾಗಲೇ ತಿಳಿಸಿದ್ದಾರೆ.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ‘ಥಗ್ ಲೈಫ್’ ಚಿತ್ರದ ಕರ್ನಾಟಕದ ವಿತರಕ ವೆಂಕಟೇಶ್ ಅವರನ್ನು ವಾಣಿಜ್ಯ ಮಂಡಳಿಗೆ ಕರೆಸಿ ಮಾತುಕತೆ ನಡೆಸಿದ್ದೇವೆ. ಕಮಲ್ ಹಾಸನ್ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಮಲ್ ಅವರಿಂದ ಕ್ಷಮೆ ಕೇಳಿಸುತ್ತೇವೆ. ಕ್ಷಮೆ ಯಾಚಿಸದಿದ್ದರೆ ರಾಜ್ಯದಲ್ಲಿ ಅವರ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದ್ದರು.

ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಜೂನ್‌ 5ರಂದು ತೆರೆ ಕಾಣುತ್ತಿದೆ.

ಕಮಲ್‌ಗೆ ಬೆಂಬಲ

ಕಮಲ್‌ ಹಾಸನ್‌ ಅವರ ಹೇಳಿಕೆಗೆ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ‘ಕನ್ನಡ, ಮಲಯಾಳ ಹಾಗೂ ತೆಲುಗು ಸೇರಿದಂತೆ ಎಲ್ಲ ದ್ರಾವಿಡ ಭಾಷೆಗಳ ತಾಯಿ ತಮಿಳು ಎಂಬ ಸಂಗತಿಯನ್ನು ಹಲವು ವಿದ್ಯಾಂಸರು ಒಪ್ಪಿದ್ದಾರೆ’ ಎಂದು ವಿಸಿಕೆ ಮತ್ತು ಎನ್‌ಟಿಕೆ ಪಕ್ಷಗಳ ನಾಯಕರು ಹೇಳಿದ್ದಾರೆ.

‘ಕಮಲ್‌ ಹಾಸನ್‌ ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಹಲವು ತಜ್ಞರು ದೃಢಪಡಿಸಿರುವ ವಾಸ್ತವಾಂಶವನ್ನೇ ಅವರು ಹೇಳಿದ್ದಾರೆ. ಕನ್ನಡ, ಮಲಯಾಳ ಮತ್ತು ತೆಲುಗು ಮಾತನಾಡುವ ಜನರಿಗೆ ತಮಿಳು ತಮ್ಮ ಭಾಷೆಯ ತಾಯಿ ಎಂಬುದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿರಬಹುದು. ಸತ್ಯವನ್ನು ಸ್ವೀಕರಿಸುವುದು ಯಾವಾಗಲೂ ಕಷ್ಟವಾಗುತ್ತದೆ’ ಎಂದು ವಿಸಿಕೆ ಮುಖ್ಯಸ್ಥ ಟಿ.ತಿರುಮಾವಲವನ್ ಪ್ರತಿಪಾದಿಸಿದ್ದಾರೆ.

ಸ್ಟಾಲಿನ್‌ಗೆ ಧನ್ಯವಾದ ಹೇಳಿದ ಕಮಲ್:

ಡಿಎಂಕೆ ಕೇಂದ್ರ ಕಚೇರಿಗೆ ಶುಕ್ರವಾರ ಭೇಟಿ ನೀಡಿದ್ದ ಎಂಎನ್‌ಎಂ ಅಧ್ಯಕ್ಷ ಕಮಲ್‌ ಹಾಸನ್‌ ಅವರು, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಜತೆ ಮಾತುಕತೆ ನಡೆಸಿದರು. ರಾಜ್ಯಸಭೆಯ ಒಂದು ಸದಸ್ಯ ಸ್ಥಾನವನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದಕ್ಕಾಗಿ ಅವರು ಮುಖ್ಯಮಂತ್ರಿಗೆ ಧನ್ಯವಾದ ಎಂದು ಹೇಳಿದರು.

‘ದೇಶದ ಒಳಿತಿಗಾಗಿ ಡಿಎಂಕೆ ಮೈತ್ರಿಕೂಟ ಸೇರಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದರು. ಡಿಎಂಕೆ ಶಾಸಕರ ಬೆಂಬಲದಿಂದ ಕಮಲ್‌ ಹಾಸನ್‌ ಅವರು ಜುಲೈನಲ್ಲಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ.

ಕ್ಷಮೆ ಕೇಳಲೇಬೇಕು: ಸಾಧುಕೋಕಿಲ
ಬೆಂಗಳೂರು: ‘ಕಮಲ್ ಹಾಸನ್‌ಗೆ ಕನ್ನಡಿಗರ ಋಣ ಇದೆ. ಕನ್ನಡದ ಬಗ್ಗೆ ಅವರು ಆಡಿರುವ ಮಾತುಗಳು ಸರಿಯಲ್ಲ. ಅವರು ಕ್ಷಮೆ ಕೇಳಲೇಬೇಕು, ಬೇರೆ ದಾರಿಯಿಲ್ಲ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಹೇಳಿದರು. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕಮಲ್‌ ಸಿನಿಮಾಗಳು ತಮಿಳುನಾಡಿನಲ್ಲಿ ಓಡಲಿಲ್ಲವೆಂದರೂ ಕರ್ನಾಟಕದಲ್ಲಿ ಹಿಟ್ ಆಗುತ್ತಿದ್ದವು. ಅವರ ‘ಗುಣ’ ಚಿತ್ರ ತಮಿಳುನಾಡಿನಲ್ಲಿ ಫ್ಲಾಪ್ ಆಗಿತ್ತು. ಆದರೆ ಇಲ್ಲಿ ಸೂಪರ್ ಹಿಟ್. ಇಲ್ಲಿನ ಪ್ರೇಕ್ಷಕರು ಎಂದಿಗೂ ಅವರನ್ನು ಕೈಬಿಟ್ಟಿಲ್ಲ. ಕನ್ನಡದ ಜನ ಅವರನ್ನು ಪ್ರೀತಿಸಿದ್ದಾರೆ. ಈಗ ಅವರ ಮಾತಿನಿಂದ ಕನ್ನಡಿಗರಿಗೆ ಬೇಸರ ಆಗಿದೆ. ಅವರು ಕ್ಷಮೆ ಕೇಳಲೇ ಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.