
ಅಹಮದಾಬಾದ್: ಅದಾನಿ ಸಮೂಹದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ್ದ ಪ್ರಕರಣದಲ್ಲಿ, ದೆಹಲಿ ಮೂಲದ ಪತ್ರಕರ್ತ ರವಿ ನಾಯರ್ ಅವರನ್ನು ‘ದೋಷಿ’ ಎಂದು ಇಲ್ಲಿನ ನ್ಯಾಯಾಲಯವೊಂದು ತೀರ್ಪು ಪ್ರಕಟಿಸಿದೆ. ಅವರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು ₹5,000 ದಂಡ ವಿಧಿಸಿದೆ.
ಗಾಂಧಿನಗರದ ಮನಸಾದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ದಾಮಿನಿ ದೀಕ್ಷಿತ್ ಅವರು, ಪತ್ರಕರ್ತ ರವಿ ನಾಯರ್ ಅವರನ್ನು ಐಪಿಸಿ ಸೆಕ್ಷನ್ 499 ಅಡಿಯಲ್ಲಿ ‘ದೋಷಿ’ ಎಂದು ಘೋಷಿಸಿದ್ದಾರೆ.
‘ರವಿ ಅವರು ಪ್ರಕಟಿಸಿರುವ ಲೇಖನವು ಅದಾನಿ ಕಂಪನಿಯ ನೀತಿಯ ವಿರುದ್ಧದ ಟೀಕೆ ಮಾತ್ರ ಆಗಿರದೆ, ಸಂಸ್ಥೆಯ ವರ್ಚಸ್ಸಿಗೆ ಧಕ್ಕೆ ತರುವಂತಿದೆ ಎಂಬುದನ್ನು ಸಾಕ್ಷ್ಯಗಳು ದೃಢಪಡಿಸಿವೆ. ಲೇಖನವನ್ನು ಪದೇ ಪದೇ ಪ್ರಕಟಿಸಲಾಗಿದೆ ಮತ್ತು ಬೇರೆ ಬೇರೆ ವೇದಿಕೆಗಳ ಮೂಲಕ ಅದನ್ನು ಹಂಚಿಕೊಳ್ಳಲಾಗಿದೆ. ಇಂಥ ಲೇಖನದಿಂದ ಕಂಪನಿಯ ಖ್ಯಾತಿಗೆ ಕುಂದುಂಟಾಗಲಿದೆ ಎಂಬ ಅರಿವು ಆರೋಪಿಗೆ ಇತ್ತು ಎಂಬುದನ್ನು ಸಾಕ್ಷ್ಯಗಳು ಸೂಚಿಸುತ್ತವೆ’ ಎಂದು ನ್ಯಾಯಾಲಯ ತಿಳಿಸಿದೆ.
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಸಂಸ್ಥೆಯು 2021ರಲ್ಲಿ ಪತ್ರಕರ್ತ ರವಿ ನಾಯರ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು.
ರವಿ ನಾಯರ್ ಅವರು ಅಕ್ಟೋಬರ್ 2020 ಮತ್ತು ಜುಲೈ 2021ರಲ್ಲಿ ಪೋಸ್ಟ್ ಮಾಡಿರುವ ಸರಣಿ ಟ್ವೀಟ್‌ಗಳು (ಈಗಿನ ಎಕ್ಸ್) ದಾರಿ ತಪ್ಪಿಸುವಂತಿವೆ ಮತ್ತು ಮಾನಹಾನಿಕರವಾಗಿವೆ ಎಂದು ಸಂಸ್ಥೆಯು ದೂರಿನಲ್ಲಿ ಆರೋಪಿಸಿತ್ತು. ಅವರು ವೆಬ್‌ಸೈಟ್‌ವೊಂದರಲ್ಲಿ ಪ್ರಕಟಿಸಿದ್ದ ಲೇಖನಗಳೂ ಮಾನಹಾನಿಕರವಾಗಿದ್ದವು ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.