ಪುಣೆ: ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿದ ಟರ್ಕಿಯಿಂದ ಸೇಬುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ನಿರ್ಧರಿಸಿದ ಕೆಲವು ದಿನಗಳ ನಂತರ, ಗುರುವಾರ ಪುಣೆಯ ಒಬ್ಬ ವ್ಯಾಪಾರಿಗೆ ಪಾಕಿಸ್ತಾನದಿಂದ ಬೆದರಿಕೆ ಧ್ವನಿ ಸಂದೇಶ ಬಂದಿದೆ.
ಪಾಕಿಸ್ತಾನವನ್ನು ಬೆಂಬಲಿಸಿದ ಟರ್ಕಿ ಧೋರಣೆ ವಿರೋಧಿಸಿ ಪುಣೆಯ ಹಣ್ಣಿನ ವ್ಯಾಪಾರಿಗಳ ಗುಂಪೊಂದು ಟರ್ಕಿ ಸೇಬುಗಳ ಆಮದನ್ನು ನಿಲ್ಲಿಸಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪಾರಿ ಸುಯೋಗ್ ಝೆಂಡೆ ಮತ್ತು ಇತರ ವ್ಯಾಪಾರಿಗಳು ಟರ್ಕಿಯಿಂದ ಸೇಬುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
‘ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನನ್ನ ಫೋನ್‌ಗೆ ಕೆಲವು ಕರೆಗಳು ಬರಲಾರಂಭಿಸಿದವು. ಆದರೆ, ನಾನು ಫೋನ್ ಎತ್ತಲಿಲ್ಲ. ನಂತರ, ನನಗೆ ಧ್ವನಿ ಸಂದೇಶ ಬಂದಿತು. ಸಂದೇಶದಲ್ಲಿ ಭಾರತವನ್ನು ನಿಂದಿಸಲಾಗಿತ್ತು. ಪಾಕಿಸ್ತಾನ ಅಥವಾ ಟರ್ಕಿಗೆ ಯಾವುದೇ ಹಾನಿ ಮಾಡಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದರು. ಬೆದರಿಕೆಗೆ ಪ್ರತಿಕ್ರಿಯೆಯಾಗಿ ನಾನೂ ಧ್ವನಿ ಟಿಪ್ಪಣಿ ಕಳುಹಿಸಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ವ್ಯಾಪಾರಿಗಳು ಪುಣೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಝೆಂಡೆ ಹತಿಳಿಸಿದ್ದಾರೆ.
ಗುರುವಾರ ಮಾರ್ಕೆಟ್‌ಯಾರ್ಡ್‌ನ ವ್ಯಾಪಾರಿಗಳು ಟರ್ಕಿಯಿಂದ ಆಮದು ಮಾಡಿಕೊಂಡ ಸೇಬುಗಳನ್ನು ರಸ್ತೆಗೆ ಎಸೆದು ಪ್ರತಿಭಟನೆ ನಡೆಸಿದರು. ಝೆಂಡೆ ಪ್ರಕಾರ, ಪುಣೆಯ ವ್ಯಾಪಾರಿಗಳು ಟರ್ಕಿಯಿಂದ ಸೇಬು, ಲಿಚಿ, ಪ್ಲಮ್, ಚೆರ್ರಿ ಮತ್ತು ಒಣ ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಸೇಬುಗಳ ಆಮದು ಮಾತ್ರ ₹1,200 ಕೋಟಿ ಮೌಲ್ಯದಷ್ಟಿತ್ತು ಎಂದು ಅವರು ಈ ಹಿಂದೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.