ADVERTISEMENT

ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ: ಪಿಸಿಸಿ ಅಧ್ಯಕ್ಷರ ರಾಜೀನಾಮೆಗೆ ಸೋನಿಯಾ ಸೂಚನೆ

ಪಿಟಿಐ
Published 15 ಮಾರ್ಚ್ 2022, 14:48 IST
Last Updated 15 ಮಾರ್ಚ್ 2022, 14:48 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಕೆಲವು ಹುದ್ದೆಗಳಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದಾರೆ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದ ಪಿಸಿಸಿ (ಪ್ರದೇಶ ಕಾಂಗ್ರೆಸ್ ಸಮಿತಿ)ಅಧ್ಯಕ್ಷರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೋನಿಯಾ ಗಾಂಧಿ ಸೂಚನೆ ನೀಡಿದ್ದಾರೆ.

ಪಿಸಿಸಿ ಮರುಸಂಘಟನೆಗೆ ಅನುಕೂಲವಾಗುವಂತೆ ಸೋನಿಯಾ ಗಾಂಧಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.

ADVERTISEMENT

ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಕುರಿತು ಆತ್ಮಾವಲೋಕನ ನಡೆಸುವ ನಿಟ್ಟಿನಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಇತರೆ ಪ್ರಮುಖ ನಾಯಕರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯನ್ನು ಭಾನುವಾರ ನಡೆಸಲಾಗಿತ್ತು.

ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸೋನಿಯಾ ಅವರು ಸಭೆಯಲ್ಲಿ ಹೇಳಿದ್ದರು. ಆದರೆ, ಸಿಡಬ್ಲ್ಯುಸಿ ಅದನ್ನು ಒಪ್ಪಿಕೊಳ್ಳಲಿಲ್ಲ ಎಂದು ಮೂಲಗಳು ತಿಳಿಸಿದ್ದವು.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರೇ ಸದ್ಯಕ್ಕೆ ಮುಂದುವರಿಯಲಿ ಎಂದು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಸೋನಿಯಾ ಅವರ ನಾಯಕತ್ವದಲ್ಲಿ ಸಿಡಬ್ಲ್ಯುಸಿ ವಿಶ್ವಾಸ ಇರಿಸಿದ್ದು, ಸಿಡಬ್ಲ್ಯುಸಿಯ ಎಲ್ಲ ಸದಸ್ಯರೂ ಸೋನಿಯಾ ಮುಂದುವರಿಕೆಯನ್ನು ಬಯಸಿದ್ದರು. ಪಕ್ಷ ಬಲಪಡಿಸುವಿಕೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ‌

ಪಕ್ಷವು ಪಂಜಾಬ್‌ನಲ್ಲಿ 117 ಸ್ಥಾನಗಳ ಪೈಕಿ 18 ಸ್ಥಾನಗಳಲ್ಲಿ ಮಾತ್ರ ಜಯಿಸುವ ಮೂಲಕ ಅಧಿಕಾರ ಕಳೆದುಕೊಂಡಿದ್ದು, ಉತ್ತರಪ್ರದೇಶದ 403ರಲ್ಲಿ ಕೇವಲ 2, ಉತ್ತರಾಖಂಡದ 70ರಲ್ಲಿ 18, ಗೋವಾದ 40ರಲ್ಲಿ 12 ಮತ್ತು ಮಣಿಪುರದಲ್ಲಿ 60 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮಾತ್ರ ಗಳಿಸಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.