ಏಕನಾಥ ಶಿಂದೆ, ದೇವೇಂದ್ರ ಫಡಣವೀಸ್ (ಮಧ್ಯ) ಮತ್ತು ಅಜಿತ್ ಪವಾರ್
ಮುಂಬೈ: ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಕೂಟವು ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತ ಮತ್ತು ದಾಖಲೆಯ ಸ್ಥಾನಗಳನ್ನು ಗೆದ್ದು ಮತ್ತೊಂದು ಅವಧಿಗೆ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದೆ. ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿರುವ ಬಿಜೆಪಿಯು, ಅಧಿಕಾರ ಹಂಚಿಕೆ ಸೂತ್ರವನ್ನು ಹೊಸದಾಗಿ ರೂಪಿಸಲು ಹಾಗೂ ಪ್ರಮುಖ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ.
288 ಸದಸ್ಯ ಬಲದ ಮಹಾ ವಿಧಾನಸಭೆಯಲ್ಲಿ 'ಮಹಾಯುತಿ' ಮೈತ್ರಿಕೂಟಕ್ಕೆ ಅತಿದೊಡ್ಡ ಜನಾದೇಶ ದೊರೆತಿದೆ. ಬಿಜೆಪಿ, ಶಿವಸೇನಾ ಮತ್ತು ಎನ್‌ಸಿಪಿ ಇರುವ ಈ ಮೈತ್ರಿಕೂಟದ 235 ಮಂದಿ ಗೆಲುವು ಸಾಧಿಸಿದ್ದಾರೆ.
2014 ಹಾಗೂ 2019ರ ಚುನಾವಣೆಗಳಲ್ಲಿ ಕ್ರಮವಾಗಿ 122 ಮತ್ತು 105 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಸಲ 132 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಬೇರೆಬೇರೆ ಪಕ್ಷಗಳು ಹಾಗೂ ಪಕ್ಷೇತರರು ಸೇರಿದಂತೆ ಐವರ ಬೆಂಬಲವೂ ಬಿಜೆಪಿಗೆ ಇದೆ. ಶಿವಸೇನಾ 57 ಮತ್ತು ಎನ್‌ಸಿಪಿ 41 ಸದಸ್ಯರನ್ನು ಹೊಂದಿವೆ.
ಒಬ್ಬರು ಮುಖ್ಯಮಂತ್ರಿ ಹಾಗೂ ಇಬ್ಬರು ಉಪಮುಖ್ಯಮಂತ್ರಿ ಸೂತ್ರದಡಿ ಅಧಿಕಾರ ಹಂಚಿಕೆಗೆ ಮಾತುಕತೆ ನಡೆಯುತ್ತಿದೆಯಾದರೂ, ಅದರಾಚೆಗೂ ಹಲವು ವಿಚಾರಗಳನ್ನು ಗಮನಿಸಬೇಕಿದೆ.
2014 ರಿಂದ 2019ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ–ಶಿವಸೇನಾ ಮೈತ್ರಿ ಸರ್ಕಾರವನ್ನು ಹೊರತುಪಡಿಸಿ 1996 ರಿಂದ 2024ರವರೆಗೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರಗಳ ಅವಧಿಯಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗಿತ್ತು.
1995–99ರಲ್ಲಿ ಅವಿಭಜಿತ ಶಿವಸೇನಾ–ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದಾಗ ಶಿವಸೇನಾದ ಡಾ.ಮನೋಹರ್ ಜೋಶಿ ಮತ್ತು ನಾರಾಯಣ ರಾಣೆ ಅವರು ಕ್ರಮವಾಗಿ ಮುಖ್ಯಮಂತ್ರಿಗಳಾಗಿದ್ದರು. ಬಿಜೆಪಿಯ ಗೋಪಿನಾಥ್ ಮುಂಡ ಅವರು ಪೂರ್ಣಾವಧಿಗೆ ಉಪಮುಖ್ಯಮಂತ್ರಿಯಾಗಿದ್ದರು. ಆದರೆ, ಸರ್ಕಾರವು ದಿ.ಬಾಳಾಸಾಹೇಬ್ ಠಾಕ್ರೆ ಅವರ ನಿಯಂತ್ರಣದಲ್ಲಿತ್ತು.
1999–2014ರ ವರೆಗೆ ಮೈತ್ರಿ ಸರ್ಕಾರ ರಚನೆಯಾದಾಗ ಕಾಂಗ್ರೆಸ್–ಎನ್‌ಸಿಪಿ ಕ್ರಮವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನ ಹಂಚಿಕೊಂಡಿದ್ದವು. ಈ ಅವಧಿಗಳಲ್ಲಿ ವಿಲಾಸರಾವ್ ದೇಶಮುಖ್ (ಎರಡು ಬಾರಿ), ಸುಶೀಲ್ ಕುಮಾರ್ ಶಿಂದೆ, ಅಶೋಕ್ ಚವಾಣ್ ಮತ್ತು ಪೃಥ್ವಿರಾಜ್ ಚವಾಣ್ ಅವರು ಮುಖ್ಯಮಂತ್ರಿಗಳಾಗಿದ್ದರು. ಎನ್‌ಸಿಪಿಯಿಂದ ವಿಜಯಸಿನ್ಹ ಮೋಹಿತೆ–ಪಾಟೀಲ್, ಛಗನ್ ಭುಜಬಲ್, ಆರ್.ಆರ್.ಪಾಟೀಲ್ ಮತ್ತು ಅಜಿತ್ ಪವಾರ್ ಕ್ರಮವಾಗಿ ಡಿಸಿಎಂಗಳಾಗಿದ್ದರು.
ಆದರೆ, 2014ರಲ್ಲಿ ಬಿಜೆಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನಾ ಮೈತ್ರಿಕೂಟ ಮತ್ತೆ ಸರ್ಕಾರ ರಚನೆಯಾದಾಗ, ಆಗಿನ ಸಿಎಂ ದೇವೇಂದ್ರ ಫಡಣವೀಸ್ ಮಿತ್ರಪಕ್ಷಕ್ಕೆ ಡಿಸಿಎಂ ಸ್ಥಾನ ಬಿಟ್ಟುಕೊಟ್ಟಿರಲಿಲ್ಲ. ಆದರೆ, 2019ರಲ್ಲಿ ಬಹುಮತವಿಲ್ಲದಿದ್ದರೂ ಸರ್ಕಾರ ರಚನೆಗೆ ಮುಂದಾಗಿದ್ದ ಫಡಣವೀಸ್‌ಗೆ ಉದ್ಧವ್ ಠಾಕ್ರೆ ಬೆಂಬಲ ನೀಡಿರಲಿಲ್ಲ. ಆಗ, ಸರ್ಕಾರ ಉಳಿಸಿಕೊಳ್ಳಲು ಶರದ್ ಪವಾರ್ ಅವರ ಅವಿಭಜಿತ ಎನ್‌ಸಿಪಿಯ ಅಜಿತ್ ಪವಾರ್ ಅವರನ್ನು ಉಪಮುಖ್ಯಮಂತ್ರಿ ಗಾದಿಗೇರಿಸಿದ್ದರು. ಆದಾಗ್ಯೂ ಸರ್ಕಾರ ಉಳಿಯಲಿಲ್ಲ.
ನಂತರ, ಕಾಂಗ್ರೆಸ್ ಮತ್ತು ಎನ್‌ಸಿಪಿ ಬೆಂಬಲದೊಂದಿಗೆ ಶಿವಸೇನಾ, 'ಮಹಾ ವಿಕಾಸ ಆಘಾಡಿ' ಮೈತ್ರಿ ಸರ್ಕಾರ ರಚಿಸಿತ್ತು. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದರೆ, ಎನ್‌ಸಿಪಿಯ ಅಜಿತ್ ಪವಾರ್ ಮತ್ತೆ ಉಪಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು.
ಆದರೆ, 2022ರ ಮೇನಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಹಾಗೂ ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯ ಸಾರಿದ ಏಕನಾಥ ಶಿಂದೆ ಅವರು, ಬಿಜೆಪಿ ಬೆಂಬಲದೊಂದಿಗೆ ಜೂನ್ ಅಂತ್ಯದ ವೇಳೆಗೆ 'ಮಹಾಯುತಿ' ಸರ್ಕಾರ ರಚಿಸಿ ಸಿಎಂ ಆದರು. ಆ ವೇಳೆ ಸ್ವತಃ ಫಡಣವೀಸ್ ಅವರೇ ಡಿಸಿಎಂ ಆಗಬೇಕಾಯಿತು. ಇದೇ ವೇಳೆ ಶರದ್ ಪವಾರ್ ನಾಯಕತ್ವದ ವಿರುದ್ಧ ಸಿಡಿದು, ತಮ್ಮ ಬೆಂಬಲಿಗರೊಂದಿಗೆ ಎನ್‌ಸಿಪಿಯಿಂದ ಹೊರನಡೆದ ಅಜಿತ್ ಪವಾರ್, ಬಿಜೆಪಿ ಮತ್ತು ಶಿಂದೆ ಸರ್ಕಾರಕ್ಕೆ ಬೆಂಬಲ ಘೋಷಿಸಿ ಮತ್ತೊಮ್ಮೆ ಡಿಸಿಎಂ ಉಪಮುಖ್ಯಮಂತ್ರಿಯಾದರು.
'1999-2014ರವರೆಗೆ ಸದನದಲ್ಲಿ ಹೆಚ್ಚು ಸ್ಥಾನಗಳನ್ನು ಹೊಂದಿದ್ದ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಾಗುತ್ತಿತ್ತು. 2004ರಲ್ಲಿ ಶರದ್ ಪವಾರ್ ನಾಯಕತ್ವದಲ್ಲಿ ಎನ್‌ಸಿಪಿ ಕಾಂಗ್ರೆಸ್‌ಗಿಂತ ಎರಡು ಸ್ಥಾನ ಹೆಚ್ಚು ಗೆದ್ದಿದ್ದರೂ, ಡಿಸಿಎಂ ಸ್ಥಾನ ಮತ್ತು ಪ್ರಮುಖ ಖಾತೆಗಳನ್ನು ವಹಿಸಿಕೊಂಡಿತ್ತು. ಚುನಾವಣಾ ಪೂರ್ವದಲ್ಲಿ ಮಾಡಿಕೊಂಡಿದ್ದ ಮೈತ್ರಿಯಂತೆ ಇತರ ಸಣ್ಣ ಪಕ್ಷಗಳ ಬೆಂಬಲ ಇದ್ದದ್ದರಿಂದ, ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ಒಲಿದಿತ್ತು. ಮೈತ್ರಿ ಸರ್ಕಾರದಲ್ಲಿ ಕಡಿಮೆ ಸದಸ್ಯರನ್ನು ಹೊಂದಿರುವ ಪಕ್ಷವು ಡಿಸಿಎಂ ಹಾಗೂ ಗೃಹ ಖಾತೆ ಪಡೆಯುವುದು ಸಾಮಾನ್ಯವಾಗಿತ್ತು. ಆದರೆ, 2014–19ರಲ್ಲಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಫಡಣವೀಸ್, ಶಿವಸೇನಾಗೆ ಡಿಸಿಎಂ ಸ್ಥಾನವನ್ನಾಗಲಿ, ಗೃಹ ಖಾತೆಯನ್ನಾಗಲಿ ನೀಡಿರಲಿಲ್ಲ. ಅದೇರೀತಿ, 2022ರಲ್ಲಿ ಮಹಾಯುತಿ ಸರ್ಕಾರ ರಚನೆಯಾದಾಗ, ಮೈತ್ರಿಪಕ್ಷಗಳ ಪೈಕಿ ಹೆಚ್ಚಿನ ಸ್ಥಾನಗಳನ್ನು ಹೊಂದಿದ್ದರೂ, ಬಿಜೆಪಿಯ ಫಡಣವೀಸ್ ಉಪಮುಖ್ಯಮಂತ್ರಿಯಾಗಿಯೇ ಇರಬೇಕಾಗಿತ್ತು' ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
288 ಸದಸ್ಯ ಬಲದ ಮಹಾ ವಿಧಾನಸಭೆಯು, ಗರಿಷ್ಠ 43 ಸಚಿವರನ್ನು ಹೊಂದಬಹುದಾಗಿದೆ. ಅವುಗಳ ಪೈಕಿ ಬಿಜೆಪಿಯು 21, ಶಿವಸೇನಾ 12 ಮತ್ತು ಎನ್‌ಸಿಪಿ 10 ಖಾತೆಗಳನ್ನು ಪಡೆಯಬಹುದು ಎನ್ನಲಾಗುತ್ತಿದೆ.
ಆದರೆ, ಬಿಜೆಪಿಯು ಈ ಲೆಕ್ಕಾಚಾರಕ್ಕೆ ಒಪ್ಪಿಕೊಳ್ಳುವ ಹಾಗೂ ಪ್ರಮುಖ ಖಾತೆಗಳನ್ನು ಬಿಟ್ಟುಕೊಡುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. 'ತನಗೆ ಸಿಕ್ಕಿರುವ ಪ್ರಚಂಡ ಜನಾದೇಶ ಮತ್ತು ಮತ ಗಳಿಕೆಗೆ ಆರ್‌ಎಸ್‌ಎಸ್ ಮಾಡಿದ ಕೆಲಸವನ್ನು ಪರಿಗಣಿಸಿ, ಪ್ರಮುಖ ಖಾತೆಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ' ಎನ್ನಲಾಗಿದೆ. ಬಿಜೆಪಿಯಲ್ಲಿನ ಹಿರಿಯ ನಾಯಕರು ಕಂದಾಯ, ಗೃಹ, ಹಣಕಾಸು, ಅರಣ್ಯ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಇಂಧನ, ಕೃಷಿ, ಕೈಗಾರಿಕೆ ಮತ್ತು ಜಲ ಸಂಪನ್ಮೂಲ ಸೇರಿದಂತೆ ಪ್ರಮುಖ ಖಾತೆಗಳಿಗಾಗಿ ಈಗಾಗಲೇ ಲಾಬಿ ಆರಂಭಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.