ADVERTISEMENT

ಪಂಜಾಬ್ ಬಳಿಕ ಕಾಂಗ್ರೆಸ್ ಆಡಳಿತವಿರುವ ಛತ್ತೀಸಗಡದ ಮೇಲೆ ಎಎಪಿ ಕಣ್ಣು

ಪಿಟಿಐ
Published 20 ಮಾರ್ಚ್ 2022, 4:22 IST
Last Updated 20 ಮಾರ್ಚ್ 2022, 4:22 IST
ಪಕ್ಷದ ನಾಯಕರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ಪಕ್ಷದ ನಾಯಕರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್   

ನವದೆಹಲಿ: ಪಂಜಾಬ್‌ನಲ್ಲಿ ಜಯಭೇರಿ ಬಾರಿಸಿದ ನಂತರ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಇದೀಗ ಕಾಂಗ್ರೆಸ್ ಆಡಳಿತಾರೂಢ ಛತ್ತೀಸಗಡದ ಮೇಲೆ ಕಣ್ಣಿಟ್ಟಿದೆ. ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.

ಈ ಯೋಜನೆಯ ಅಂಗವಾಗಿ ಎಎಪಿ ಹಿರಿಯ ನಾಯಕ ಮತ್ತು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಇಂದು (ಭಾನುವಾರ) ಛತ್ತೀಸಗಡಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆಗೆ ಚಾಲನೆ ನೀಡಲಿದ್ದಾರೆ.

ಎಎಪಿ ಪೂರ್ವಾಂಚಲ ವಿಭಾಗದ ಉಸ್ತುವಾರಿ ಮತ್ತು ಬುರಾರಿ ಶಾಸಕ ಸಂಜೀವ್ ಝಾ ಕೂಡ ಗೋಪಾಲ್ ರೈ ಜೊತೆಗೆ ಛತ್ತೀಸಗಡಕ್ಕೆ ತೆರಳಲಿದ್ದಾರೆ.

ADVERTISEMENT

ಭೇಟಿ ವೇಳೆ, ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ಕಾರ್ಯತಂತ್ರ ಯೋಜನೆಯನ್ನು ರೂಪಿಸಲು ಮತ್ತು ರಾಜ್ಯದಲ್ಲಿ ಬೃಹತ್ ಸದಸ್ಯತ್ವ ಅಭಿಯಾನ ಪ್ರಾರಂಭಿಸಲು ಎಎಪಿ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಅವರು ಭಾನುವಾರ ಛತ್ತೀಸ್‌ಗಡದ ರಾಜಧಾನಿ ರಾಯಪುರದಲ್ಲಿ ಪಕ್ಷದ ರಾಜ್ಯ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.

ಸೋಮವಾರ, ಪಂಜಾಬ್‌ನಲ್ಲಿ ಪಕ್ಷದ ಅದ್ಭುತ ಗೆಲುವನ್ನು ಸಂಭ್ರಮಿಸಲು ಮತ್ತು ಛತ್ತೀಸಗಡಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ರಾಯಪುರದಲ್ಲಿ ಎಎಪಿ ನಡೆಸಲಿರುವ 'ವಿಜಯ ಯಾತ್ರೆ'ಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಮ್ಮ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಈ ಭೇಟಿ ನಡೆಯುತ್ತಿದೆ. ನಮ್ಮ ವಿಜಯ ಯಾತ್ರೆಯ ಮೂಲಕ ನಾವು ನಮ್ಮ ಪಕ್ಷದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುತ್ತೇವೆ ಎಂದು ರೈ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಮುಂದಿನ ವರ್ಷ ಛತ್ತೀಸ್‌ಗಡ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷವು ನಿರ್ಧರಿಸಿದೆ. ಏಕೆಂದರೆ, ರಾಜ್ಯದ ಜನರು, ಅದರಲ್ಲೂ ಯುವಕರು ಮತ್ತು ಮಹಿಳೆಯರು ಕಾಂಗ್ರೆಸ್ ಸರ್ಕಾರದ ಬಗ್ಗೆ ನಿರಾಶೆಗೊಂಡಿದ್ದಾರೆ ಮತ್ತು 'ಬದಲಾವಣೆ'ಯನ್ನು ಬಯಸಿದ್ದಾರೆ ಎಂದು ಹೇಳಿದ್ದಾರೆ.

ಛತ್ತೀಸ್‌ಗಡ ಪ್ರತ್ಯೇಕ ರಾಜ್ಯವಾಗಿ ರಚನೆಯಾದ ನಂತರ 15 ವರ್ಷ ಆಡಳಿತ ನಡೆಸಿದ ಬಿಜೆಪಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸಿ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಇದುವರೆಗಿನ ತನ್ನ ಮೂರೂವರೆ ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಕೂಡ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

2018 ರಲ್ಲಿ ಎಎಪಿ ಛತ್ತೀಸ್‌ಗಡ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳ ಪೈಕಿ 85 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.