ADVERTISEMENT

'ಮಾಫಿವೀರ್’ ಮೋದಿ ‘ಅಗ್ನಿಪಥ’ ಯೋಜನೆಯನ್ನು ಹಿಂಪಡೆಯಲಿ: ರಾಹುಲ್‌ ಒತ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜೂನ್ 2022, 5:51 IST
Last Updated 18 ಜೂನ್ 2022, 5:51 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: 'ಅಗ್ನಿಪಥ' ಸಶಸ್ತ್ರ ಪಡೆಗಳ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಮಾಫಿವೀರ್‌’ ಎಂದು ಸಂಬೋಧಿಸುವ ಮೂಲಕ ಅಗ್ನಿಪಥ ಯೋಜನೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಶನಿವಾರ ಟ್ವೀಟ್‌ ಮಾಡಿರುವ ಅವರು, ‘ಸತತ 8 ವರ್ಷಗಳಿಂದ ‘ಜೈ ಜವಾನ್, ಜೈ ಕಿಸಾನ್’ ಎಂಬ ಮೌಲ್ಯಗಳಿಗೆ ಬಿಜೆಪಿ ಸರಕಾರ ಅವಮಾನ ಮಾಡುತ್ತಿದೆ. ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಈ ಹಿಂದೆ ಒತ್ತಾಯಿಸಿದ್ದೆ. ಅದೇ ರೀತಿ ದೇಶದ ಯುವಕರ ಬೇಡಿಕೆಗೆ ಒಪ್ಪಿಕೊಳ್ಳುವ ಮೂಲಕ ಪ್ರಧಾನಿ ಮೋದಿ 'ಮಾಫಿವೀರ್'(ಕ್ಷಮೆಯಾಚಿಸುವ ವೀರ) ಆಗಬೇಕು. 'ಅಗ್ನಿಪಥ' ಯೋಜನೆಯನ್ನು ಕೂಡಲೇ ಹಿಂಪಡೆಯಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರ ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ಮೋದಿ ರೈತರಲ್ಲಿ ಕ್ಷಮೆಯಾಚಿಸಿದ್ದರು.

ಅಗ್ನಿಪಥ ಯೋಜನೆ ವಿರುದ್ಧ ಬಿಹಾರ, ಉತ್ತರ ಪ್ರದೇಶದ, ರಾಜಸ್ಥಾನ, ತೆಲಂಗಾಣ, ದೆಹಲಿ ಹಾಗೂ ಹರಿಯಾಣದಲ್ಲಿಪ್ರತಿಭಟನೆಗಳು ನಡೆದಿವೆ.

ಸೇನಾ ಪಡೆಗಳಿಗೆ ಯುವ ಜನರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳುವ ‘ಅಗ್ನಿಪಥ ಯೋಜನೆ’ಯನ್ನು ಕೇಂದ್ರ ಸರ್ಕಾರವು ಮಂಗಳವಾರ ಪ್ರಕಟಿಸಿತ್ತು. ಇದಕ್ಕೆ ಪ್ರತಿಪಕ್ಷಗಳಿಂದಲೂ ವಿರೋಧ ವ್ಯಕ್ತವಾಗಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.