ADVERTISEMENT

ಬೆಂಬಲ ಬೆಲೆ, ಮಂಡಿ ವ್ಯವಸ್ಥೆಗೆ ಧಕ್ಕೆ ಇಲ್ಲ: ಪವಾರ್‌ ವಿರುದ್ಧ ಗುಡುಗಿದ ತೋಮರ್

ಕೇಂದ್ರದ ನೂತನ ಕೃಷಿ ಕಾಯ್ದೆ ವಿಚಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜನವರಿ 2021, 13:14 IST
Last Updated 31 ಜನವರಿ 2021, 13:14 IST
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌   

ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ಟೀಕಿಸಿ ಹೇಳಿಕೆ ನೀಡಿದ್ದ ಮಾಜಿ ಕೇಂದ್ರ ಸಚಿವ ಶರದ್ ಪವಾರ್ ವಿರುದ್ಧ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಂಗ್ರಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು ಮಂಡಿ ವ್ಯವಸ್ಥೆಯನ್ನು ದುರ್ಬಲಗೊಳಿಸಲಿದೆ' ಎಂದು ಶರದ್‌ ಪವಾರ್‌ ಸರಣಿ ಟ್ವೀಟ್‌ ಮಾಡಿದ್ದರು.

'ಹೊಸ ಕೃಷಿ ಕಾನೂನುಗಳು ಖಾಸಗಿ ವ್ಯಾಪಾರಿಗಳಿಂದ ವಸೂಲಿ ಮತ್ತು ಶುಲ್ಕ ಸಂಗ್ರಹಣೆ, ವಿವಾದ ಪರಿಹಾರ, ಕೃಷಿ ವ್ಯಾಪಾರ ಪರವಾನಗಿ ಮತ್ತು ಇ-ವಹಿವಾಟಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಂಡಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ' ಎಂದು ಟ್ವೀಟ್‌ನಲ್ಲಿ ಪವಾರ್‌ ವಿಶ್ಲೇಷಿಸಿದ್ದರು.

ADVERTISEMENT

ಈ ಬಗ್ಗೆ ಟ್ವೀಟ್‌ ಮೂಲಕವೇ ಪ್ರತಿಕ್ರಿಯಿಸಿರುವ ತೋಮರ್, 'ಹೊಸ ಕೃಷಿ ಕಾಯ್ದೆಗಳು ಪ್ರಸ್ತುತ ಇರುವ ಬೆಂಬಲ ಬೆಲೆ ವ್ಯವಸ್ಥೆ ಮತ್ತು ಮಂಡಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದು ಹೇಳಿದ್ದಾರೆ.

'ಹೊಸ ಕಾಯ್ದೆಗಳು ಮಂಡಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸೇವೆಗಳು ಮತ್ತು ಮೂಲಸೌಕರ್ಯಗಳ ವಿಚಾರದಲ್ಲಿ ಮಂಡಿಗಳು ಮೊದಲಿಗಿಂತ ಹೆಚ್ಚು ಸ್ಪರ್ಧಾತ್ಮಕ ಮತ್ತು ಕಡಿಮೆ ವೆಚ್ಚದಾಯಕವಾಗುತ್ತವೆ' ಎಂದು ತೋಮರ್‌ ತಿಳಿಸಿದ್ದಾರೆ.

'ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಲು ಹೆಚ್ಚಿನ ಆಯ್ಕೆಗಳಿರುತ್ತವೆ. ಅವರು ಬೇರೆ ರಾಜ್ಯಗಳಲ್ಲೂ ತಮ್ಮ ಉತ್ಪನ್ನಗಳನ್ನು ಮಾರಲು ಅವಕಾಶವಿರುತ್ತದೆ. ಆ ಮೂಲಕ ಅವರು ಹೆಚ್ಚು ಲಾಭ ಗಳಿಸಬಹುದು. ಇದರಿಂದ ಬೆಂಬಲ ಬೆಲೆ ವ್ಯವಸ್ಥೆಯು ದುರ್ಬಲಗೊಳ್ಳುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ಶರದ್ ಪವಾರ್ ಅವರು ಹಿರಿಯ ರಾಜಕಾರಣಿ ಮತ್ತು ಮಾಜಿ ಕೇಂದ್ರ ಕೃಷಿ ಸಚಿವರಾಗಿದ್ದವರು. ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ಕೃಷಿ ಸುಧಾರಣೆಗಳನ್ನು ತರಲು ಅವರು ಸ್ವತಃ ಪ್ರಯತ್ನಿಸಿದ್ದಾರೆ. ಆದರೆ, ಅವರು ಉದ್ದೇಶಪೂರ್ವಕವಾಗಿಯೇ ಸತ್ಯಗಳನ್ನು ಮರೆಮಾಚುತ್ತಿರುವುದು ಬೇಸರದ ಸಂಗತಿ' ಎಂದು ತೋಮರ್‌ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.