ಅಹಮದಾಬಾದ್: ಏರ್ ಇಂಡಿಯಾ ವಿಮಾನವು ಪತನಗೊಂಡ ಮೂರು ದಿನಗಳ ನಂತರ, 47 ಮಂದಿಯ ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆ ಮೂಲಕ ಗುರುತಿಸಲಾಗಿದೆ. ಈ ಪೈಕಿ 24 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
ಈವರೆಗೆ ಗುರುತು ಪತ್ತೆ ಮಾಡಲಾದ ಸಂತ್ರಸ್ತರು ರಾಜಸ್ಥಾನ ಮತ್ತು ಗುಜರಾತ್‌ನ ವಿವಿಧ ಪ್ರದೇಶದವರು ಎಂದು ಅವರು ತಿಳಿಸಿದರು.
ಬಹುತೇಕ ಮೃತದೇಹಗಳು ಗುರುತಿಸಲಾಗದಷ್ಟುಸುಟ್ಟು ಕರಕಲಾಗಿವೆ ಅಥವಾ ಚೆಲ್ಲಾಪಿಲ್ಲಿಯಾಗಿವೆ. ಆದ್ದರಿಂದ ಅಧಿಕಾರಿಗಳು ಡಿಎನ್‌ಎ ಪರೀಕ್ಷೆ ನಡೆಸಿ ಮೃತರ ಗುರುತು ಪತ್ತೆ ಮಾಡುತ್ತಿದ್ದಾರೆ. ಈ ಪ್ರಕ್ರಿಯೆಗಾಗಿ 230 ತಂಡಗಳನ್ನು ರಚಿಸಲಾಗಿದೆ.
ಪತನಗೊಂಡ ಏರ್ ಇಂಡಿಯಾ ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಮಂದಿ ಮೃತಪಟ್ಟಿದ್ದಾರೆ. ವಿಮಾನ ಡಿಕ್ಕಿ ಹೊಡೆದ ಸ್ಥಳದಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳೂ ಸೇರಿ 29 ಮಂದಿ ಮೃತಪಟ್ಟಿದ್ದಾರೆ.
ಶವಗಳ ಅಂತ್ಯಸಂಸ್ಕಾರ:
ಮೃತದೇಹಗಳನ್ನು ಪಡೆದ ಕುಟುಂಬಸ್ಥರು ಪಾರ್ಥಿವ ಶರೀರಗಳ ಅಂತ್ಯಸಂಸ್ಕಾರವನ್ನು ಭಾನುವಾರ ನೆರವೇರಿಸಿದರು.
‘ಹಸ್ತಾಂತರಿಸಲಾದ ಶವಪೆಟ್ಟಿಗೆಯನ್ನು ತೆರೆಯದಂತೆ ಸೂಚನೆ ನೀಡಲಾಗಿದೆ’ ಎಂದು ಮೃತರ ಸಂಬಂಧಿಯೊಬ್ಬರು ತಿಳಿಸಿದರು.
ತನಿಖೆ ಚುರುಕು:
ವಿಮಾನ ಪತನಕ್ಕೆ ಸಂಬಂಧಿಸಿದ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ನೇತೃತ್ವದಲ್ಲಿ ಹಲವು ಕೇಂದ್ರೀಯ ಮತ್ತು ರಾಜ್ಯ ಸಂಸ್ಥೆಗಳು ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿವೆ ಎಂದು ಅವರು ಹೇಳಿದರು.
ಮತ್ತೊಂದು ಪವಾಡಕ್ಕಾಗಿ ಪ್ರಾರ್ಥನೆ:
ಏರ್ ಇಂಡಿಯಾ ವಿಮಾನವು ಅಪ್ಪಳಿಸಿದ್ದ ಕಾಲೇಜು ಹಾಸ್ಟೆಲ್ ಕಟ್ಟಡದಲ್ಲಿದ್ದ ತಾಯಿ ಮತ್ತು ಎರಡು ವರ್ಷದ ಮಗಳಿಗಾಗಿ ಹಾಸ್ಟೆಲ್ ಬಾಣಸಿಗ ರವಿ ಠಾಕೂರ್ ಅವರು ಪರಿತಪಿಸುತ್ತಿದ್ದಾರೆ. ದುರಂತಕ್ಕೂ 30 ನಿಮಿಷ ಮುನ್ನ ರವಿ ಮತ್ತು ಅವರ ಪತ್ನಿ ಲಂಚ್ ಬಾಕ್ಸ್ ಡೆಲಿವರಿ ಮಾಡಲು ಹೊರಗೆ ಬಂದಿದ್ದರು. ಆದರೆ ಕಟ್ಟಡದಲ್ಲಿ ಅವರ ತಾಯಿ ಮತ್ತು ಮಗಳು ಇದ್ದರು. ‘ತಾಯಿ ಮತ್ತು ಮಗು ಸದ್ಯ ನಾಪತ್ತೆಯಾಗಿದ್ದಾರೆ. ವಿಮಾನದ ಪ್ರಯಾಣಿಕರೊಬ್ಬರು ಬದುಕುಳಿದಂತೆ ಇನ್ನೊಂದು ಪವಾಡ ಘಟಿಸಲಿ’ ಎಂದು ಠಾಕೂರ್ ಪ್ರಾರ್ಥಿಸುತ್ತಿದ್ದಾರೆ. ‘ತಾಯಿ ಮತ್ತು ಮಗಳಿಗಾಗಿ ಆಸ್ಪತ್ರೆ ಶವಾಗಾರದಲ್ಲೆಲ್ಲ ಹುಡುಕಿದೆ. ಏನೂ ಪ್ರಯೋಜನವಾಗಿಲ್ಲ’ ಎಂದು ಠಾಕೂರ್ ನೋವು ತೋಡಿಕೊಂಡರು. ‘ಲಂಚ್ ಬಾಕ್ಸ್ ಡೆಲಿವರಿಗೆ ಹೊರಡುವ ಮುನ್ನ ಮಗಳನ್ನು ತೂಗುಯ್ಯಾಲೆ ಮೇಲೆ ಮಲಗಿಸಿದ್ದೆ. ಅವಘಡದ ಸಂದರ್ಭದಲ್ಲಿ ಮಗಳನ್ನು ಯಾರಾದರೂ ಒಯ್ದಿರುವ ಸಾಧ್ಯತೆ ಇದೆ’ ಎಂದು ಹೇಳಿದರು. ‘ಇದನ್ನು ನಾಪತ್ತೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಬ್ರಿಟಿಷ್ ದಂಪತಿಯ ದುರಂತ ಅಂತ್ಯ;
‘ಅತ್ಯಂತ ಸಂತೋಷದಿಂದ ಹಿಂದಿರುಗುತ್ತಿದ್ದೇವೆ’ –ವಿಮಾನ ದುರಂತದಲ್ಲಿ ಮೃತಪಟ್ಟ ಬ್ರಿಟಿಷ್ ಪ್ರಜೆ ಫಿಯೋಂಗಲ್ ಗ್ರೀನ್ ಲಾ–ಮೀಕ್ ಅವರು ವಿಮಾನವು ಅಹಮದಾಬಾದ್‌ನಿಂದ ಹೊರಡುವ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ವಿಡಿಯೊದಲ್ಲಿ ಹೇಳಿದ್ದ ಮಾತಿದು. ಫಿಯೋಂಗಲ್ ಅವರು ಪತಿ ಜೆಮಿ ಮೀಕ್ ಅವರೊಂದಿಗೆ ಭಾರತಕ್ಕೆ ಪ್ರವಾಸ ಬಂದಿದ್ದರು. ಆದರೆ ದುರದೃಷ್ಟವಶಾತ್ ಇದು ದಂಪತಿಯ ಅಂತಿಮಯಾತ್ರೆಯಾಗಿ ಮಾರ್ಪಟ್ಟಿತು. ವಿಡಿಯೊದಲ್ಲಿ ದಂಪತಿ ‘ನಾವೀಗ ವಿಮಾನ ನಿಲ್ದಾಣದಲ್ಲಿದ್ದೇವೆ. ಗುಡ್ ಬೈ ಇಂಡಿಯಾ’ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನಾದಿನ ಪೋಸ್ಟ್ ಮಾಡಿದ್ದ ವಿಡಿಯೊದಲ್ಲಿ ಅವರ ಭಾರತ ಪ್ರವಾಸದ ಕುರಿತ ಅನುಭವವನ್ನು ಹಂಚಿಕೊಂಡಿದ್ದರು. ‘ಭಾರತದಲ್ಲಿ ಇದು ನಮ್ಮ ಕೊನೆಯ ರಾತ್ರಿ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.