ADVERTISEMENT

ಕ್ರಿಮಿನಲ್‌ಗಳ ಪತ್ತೆಗೆ ’ತ್ರಿನೇತ್ರ’ ಆ್ಯಪ್‌

ಏಜೆನ್ಸೀಸ್
Published 27 ಡಿಸೆಂಬರ್ 2018, 12:28 IST
Last Updated 27 ಡಿಸೆಂಬರ್ 2018, 12:28 IST
   

ನವದೆಹಲಿ: ಪ್ರಕರಣಗಳನ್ನು ಶೀಘ್ರ ಬೇಧಿಸಲು ಉತ್ತರ ಪ್ರದೇಶ ಪೊಲೀಸರು ಐದು ಲಕ್ಷ ಕ್ರಿಮಿನಲ್‌ಗಳ ಪೂರ್ಣ ಮಾಹಿತಿಯನ್ನು ಒಳಗೊಂಡ ದತ್ತಾಂಶ ಬಳಸಿ ಕಾರ್ಯನಿರ್ವಹಿಸುವ ಅಪ್ಲಿಕೇಷನ್‌ ಸಹಕಾರ ಪಡೆಯುತ್ತಿದ್ದಾರೆ. ಕೃತಕ ಬುದ್ಧಿಮತ್ತೆ(ಎಐ) ಮತ್ತು ಮುಖ ಗುರುತಿಸುವ ವ್ಯವಸ್ಥೆ ಸೇರಿ ನೂತನ ತಂತ್ರಜ್ಞಾನಗಳನ್ನು ಒಳಗೊಂಡಿರುವುದಾಗಿ ಪೊಲೀಸ್‌ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

’ತ್ರಿನೇತ್ರ’ ಅಥವಾ ಮೂರನೇ ಕಣ್ಣು ಎಂದು ಹೆಸರಿಸಲಾಗಿರುವ ಈ ವ್ಯವಸ್ಥೆಗೆ ಉತ್ತರ ಪ್ರದೇಶ ಪೊಲೀಸ್‌ ಇಲಾಖೆ ಮುಖ್ಯಸ್ಥ ಒ.ಪಿ.ಸಿಂಗ್‌ ಲಖನೌದಲ್ಲಿ ಚಾಲನೆ ನೀಡಿದ್ದಾರೆ. ರಾಜ್ಯದ ಪೊಲೀಸರಲ್ಲಿರುವ ಕ್ರಿಮಿನಲ್‌ಗಳ ದಾಖಲೆಗಳು, ಕಾರಾಗೃಹ ಇಲಾಖೆ ಮತ್ತು ರೈಲ್ವೆ ಪೊಲೀಸರ ದಾಖಲೆಗಳನ್ನು ಒಂದುಗೂಡಿಸಿ ಕ್ರಿಮಿನಲ್‌ಗಳ ದತ್ತಾಂಶವನ್ನು ರೂಪಿಸಲಾಗಿದೆ.

ನಿರ್ದಿಷ್ಟ ವ್ಯಕ್ತಿಯ ಹಿನ್ನೆಲೆ, ಕ್ರಿಮಿನಲ್‌ ಪ್ರಕರಣಗಳು, ಗ್ಯಾಂಗ್‌ನಲ್ಲಿರುವ ಸದಸ್ಯರ ಮಾಹಿತಿಯನ್ನು ವೇಗವಾಗಿ ಪಡೆಯುವುದು ಸಾಧ್ಯವಾಗಲಿದೆ ಎನ್ನುತ್ತಾರೆ ಆ್ಯಪ್‌ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾದ ಹಿರಿಯ ಪೊಲೀಸ್‌ ಅಧಿಕಾರಿ. ಬಯೋಮೆಟ್ರಿಕ್‌ ದಾಖಲೆಗಳನ್ನು ಪರಿಶೀಲಿಸುವುದು, ಮುಖಚಹರೆಯ ಮೂಲಕ ಗುರುತು ಪತ್ತೆ, ಕೃತಕ ಬುದ್ಧಿಮತ್ತೆ ಬಳಕೆ, ಅಕ್ಷರಗಳನ್ನು ಟೈಪಿಸಿ ಹುಡುಕುವುದು ಸಾಧ್ಯವಾಗಲಿದೆ.

ADVERTISEMENT

‍ಪ್ರಸ್ತುತ ಹಿರಿಯ ಪೊಲೀಸ್‌ ಅಧಿಕಾರಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪ್‌ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಠಾಣಾ ಮಟ್ಟದ ಪೊಲೀಸರಿಗೂ ಇದು ಬಳಕೆಗೆದೊರೆಯಲಿದೆ. ಫೋಟೊಗಳು ಮತ್ತು ಆರೋಪಿಯ ಮುಖವನ್ನು ಕೃತಕ ಬುದ್ಧಿಮತ್ತೆ ಟೂಲ್‌ಗಳನ್ನು ಬಳಸಿ ಕ್ರಿಮಿನಲ್‌ ಹಿನ್ನೆಲೆ ಮಾಹಿತಿಯನ್ನು ಬಹುಬೇಗ ಪಡೆದುಕೊಳ್ಳಬಹುದು. ಪ್ರಕರಣದ ತನಿಖೆಯಲ್ಲಿರುವ ಪೊಲೀಸ್‌, ಆರೋಪಿಯ ಸಂಪೂರ್ಣ ಮಾಹಿತಿಯನ್ನು ತಕ್ಷಣದಲ್ಲೇ ಗ್ರಹಿಸಲು ಸಹಕಾರಿಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.