ADVERTISEMENT

ತಮಿಳುನಾಡು ಚುನಾವಣೆ: 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಬಿಜೆಪಿ

ಪ್ರಜಾವಾಣಿ ವಿಶೇಷ
Published 6 ಮಾರ್ಚ್ 2021, 2:01 IST
Last Updated 6 ಮಾರ್ಚ್ 2021, 2:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮೈತ್ರಿಕೂಟದ ಜೊತೆ ಸೀಟು ಹಂಚಿಕೆ ಅಂತಿಮಗೊಳಿಸಿರುವ ಬಿಜೆಪಿ, 20 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

2019ರಲ್ಲಿ ಸೋಲು ಅನುಭವಿಸಿರುವ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರಕ್ಕೂ ನಡೆಯಲಿರುವ ಉಪಚುನಾವಣೆಯಲ್ಲೂ ಬಿಜೆಪಿ, ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ.

ಬಿಜೆಪಿ ಹಾಗೂ ಎಐಎಡಿಎಂಕೆ ನಡುವಣ ಕಳೆದೊಂದು ವಾರದ ಮಾತುಕತೆಯ ಬಳಿಕ ಸೀಟು ಹಂಚಿಕೆ ಸಂಬಂಧ ಒಮ್ಮತಕ್ಕೆ ಬರಲಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಸೇರಿದಂತೆ ಪ್ರಮುಖರು ಸೀಟು ಹಂಚಿಕೆ ಸಂಬಂಧ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.

ADVERTISEMENT

ಬಿಜೆಪಿ ಅಭ್ಯರ್ಥಿಗಳು ಯಾವೆಲ್ಲ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂಬುದನ್ನು ಆನಂತರ ಘೋಷಿಸಲಾಗುವುದು.

ಉತ್ತರ ತಮಿಳುನಾಡಿನಲ್ಲಿ ವನ್ನಿಯಾರ್ ಸಮುದಾಯ ಪ್ರಬಲವಾಗಿದ್ದು, ಅವರ ಮತಗಳನ್ನು ಆಕರ್ಷಿಸಲು ಮಗದೊಂದು ಪ್ರಭಾವಿ ಪಕ್ಷವಾದ ಪಿಎಂಕೆ ಜೊತೆಗೂ ಎಐಎಡಿಎಂಕೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ.

ಕನ್ಯಾಕುಮಾರಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷವು ಬಿಜೆಪಿಗೆ ಬೆಂಬಲವನ್ನು ಸೂಚಿಸಲಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್. ವಸಂತಕುಮಾರ್ ವಿರುದ್ಧ ಬಿಜೆಪಿಯ ಪೊನ್ ರಾಧಾಕೃಷ್ಣನ್ ಪರಾಭವಗೊಂಡಿದ್ದರು. ವಸಂತಕುಮಾರ್ ಕೋವಿಡ್ ಸೋಂಕಿನಿಂದಾಗಿ 2020 ಆಗಸ್ಟ್‌ನಲ್ಲಿ ನಿಧನ ಹೊಂದಿದ್ದರು.

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಚುನಾವಣೆಗಾಗಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವು ಭರದಿಂದ ಪೂರ್ವ ತಯಾರಿ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.