ಚೆನ್ನೈ: ಕರೂರಿನಲ್ಲಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಡೆಸಿದ ರ‍್ಯಾಲಿ ವೇಳೆ ಕಾಲ್ತುಳಿತ ಪ್ರಕರಣದಲ್ಲಿ 41 ಮಂದಿ ಮೃತಪಟ್ಟ ಪ್ರಕರಣದಲ್ಲಿ ವಿರೋಧ ಪಕ್ಷವಾದ ಎಐಎಡಿಎಂಕೆ, ಬಿಜೆಪಿ ಪಕ್ಷವು ಟಿವಿಕೆ ಅಧ್ಯಕ್ಷ ವಿಜಯ್ ವಿಚಾರದಲ್ಲಿ ಮೃದುನೀತಿ ತಳೆದಿವೆ. ಈ ಪ್ರಕರಣದಲ್ಲಿ ವಿಜಯ್ ಅವರನ್ನು ದೂಷಿಸುವುದನ್ನು ಕೈಬಿಟ್ಟಿರುವ ಎರಡು ಪಕ್ಷಗಳು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಜವಾಬ್ದಾರಿಯನ್ನು ನೆನಪಿಸುತ್ತಿವೆ.
ಹೀಗಾಗಿ, ಎರಡು ಪಕ್ಷಗಳು ತಮ್ಮ ಮೈತ್ರಿಕೂಟ ಸೇರಲು ಕಸರತ್ತು ನಡೆಸುತ್ತಿವೆ ಎಂದು ವಿಶ್ಲೇಷಿಸಲಾಗಿದೆ.
ಟಿವಿಕೆ ಬೆಂಬಲಿಸುವ ಕುರಿತಂತೆ ಬಿಜೆಪಿ ನಾಯಕರೊಬ್ಬರು ವಿಜಯ್ ಅವರ ಆಪ್ತ ವಲಯಕ್ಕೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಈ ನಾಯಕರೇ ಎಐಎಡಿಎಂಕೆ ಪಕ್ಷವನ್ನು ಮರಳಿ ಎನ್‌ಡಿಎ ಮೈತ್ರಿಕೂಟ ಸೇರಲು ಪ್ರಮುಖ ಪಾತ್ರ ವಹಿಸಿದ್ದರು. ಸೆ.28ರಂದು ವಿಜಯ್ ಜೊತೆಗೆ ರಾಹುಲ್ ಗಾಂಧಿ ಮಾತುಕತೆ ನಡೆಸಿದ ಬೆನ್ನಲ್ಲೇ, ಈ ಸಂದೇಶ ರವಾನಿಸಿದ್ದಾರೆ.
ಟಿವಿಕೆ ಎದುರಿಸುತ್ತಿರುವ ಪರಿಸ್ಥಿತಿ ಎದುರಿಸಲು ಪಕ್ಷವೂ ಸಹಾಯ ಮಾಡಲು ಸಿದ್ಧವಿದೆ ಎಂದು ಬಿಜೆಪಿ ನಾಯಕರು ಸಂದೇಶ ಕಳುಹಿಸಿದ್ದಾರೆ. ಆದರೆ, ಎನ್‌ಡಿಎ ಸೇರ್ಪಡೆಯಾಗುವ ಅಥವಾ ಬಿಜೆಪಿಯನ್ನು ಒಪ್ಪುವುದು ದೂರದ ವಿಚಾರ ಎಂದು ಮೂಲಗಳು ತಿಳಿಸಿವೆ.
ಮೈತ್ರಿ ಅನುಮಾನ: ಬಿಜೆಪಿಯು ತಮ್ಮ ಪಕ್ಷದ ಸೈದ್ಧಾಂತಿಕವಾಗಿ ವಿರೋಧ ಪಕ್ಷ ಎಂದು ಟಿವಿಕೆ ಅಧ್ಯಕ್ಷ ವಿಜಯ್ ಬಹಿರಂಗವಾಗಿ ಘೋಷಿಸಿದ್ದರು. ಹಲವು ಭಾಷಣಗಳಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ–ಎಐಎಡಿಎಂಕೆ ಪಕ್ಷದ ಮೈತ್ರಿಯೂ ಹೊಂದಿಕೆಯಾಗುವುದಿಲ್ಲ. ತಳಹಂತದ ಕಾರ್ಯಕರ್ತರು ಇದನ್ನು ಒಪ್ಪುವುದಿಲ್ಲ ಎಂದು ಕಳೆದ ವಾರ ಕೂಡ ಸಾರ್ವಜನಿಕವಾಗಿ ಟೀಕಿಸಿದ್ದರು.
ಬಹಿರಂಗ ಬೆಂಬಲ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಬಹಿರಂಗವಾಗಿ ವಿಜಯ್ ಅವರನ್ನು ಬೆಂಬಲಿಸಿದ್ದರು. ಕಾಲ್ತುಳಿತ ಸಂತ್ರಸ್ತರ ಮಧ್ಯೆ ಅವರ ಅನುಪಸ್ಥಿತಿ ಪ್ರಶ್ನಿಸುವುದು ಸರಿಯಲ್ಲ. ಅವರು ಏನು ನೋವು ಅನುಭವಿಸುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಹೇಳಿದ್ದರು.
‘ನಟ ವಿಜಯ್ ಅವರು ಅಭಿಮಾನಿಗಳ ಬಳಗವನ್ನು ಸೇರಿಕೊಳ್ಳಬೇಕು. ಇಡೀ ಘಟನೆಗೆ ನಟನನ್ನು ಮಾತ್ರ ದೂರುವುದರಲ್ಲಿ ಅರ್ಥವಿಲ್ಲ’ ಎಂದು ಬಿಜೆಪಿಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ತಿಳಿಸಿದ್ದರು.
2026ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯನ್ನು ಮಣಿಸಲು ತಮ್ಮ ಜೊತೆ ಕೈ ಜೋಡಿಸಬೇಕು ಎಂದು ಟಿವಿಕೆಗೆ ಎಐಎಡಿಎಂಕೆಯೂ ಮೊದಲಿನಿಂದಲೂ ಆಹ್ವಾನ ನೀಡಿದೆ. ಡಿಎಂಕೆ ವಿರೋಧಿ ಮತಗಳು ವಿಜಯ್ ಜೊತೆಗಿದ್ದು, ಅವರು ಕೈ ಜೋಡಿಸಿದರೆ, ಗೆಲುವು ಪಡೆಯುವುದು ಸುಲಭ ಎಂದು ಅಂದಾಜಿಸಿದೆ. ಇದರ ಬೆನ್ನಲ್ಲೇ, ರಾಹುಲ್ ಗಾಂಧಿ ಅವರಿಂದ ವಿಜಯ್ ಕರೆ ಸ್ವೀಕರಿಸಿರುವುದನ್ನು ಟಿವಿಕೆ ನಾಯಕರು ಖಚಿತಪಡಿಸಿದ್ದಾರೆ. ಬಿಜೆಪಿ ನಾಯಕರು ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.
ಕಾಲ್ತುಳಿತ ಪ್ರಕರಣದ ಬಳಿಕ ಟಿವಿಕೆ ಹಿರಿಯ ನಾಯಕ ಆಧವ್ ಅರ್ಜುನ ಅವರು ಎನ್‌ಎಸ್‌ಜಿ ಕಮಾಂಡೊಗಳ ಭದ್ರತೆಯಲ್ಲಿ ಚಾರ್ಟೆಡ್ ವಿಮಾನದ ಮೂಲಕ ದೆಹಲಿಗೆ ಹಾರಿದ್ದು ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಆಧವ್ ಅವರು ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ಅವರ ಅಳಿಯ. 2019–21ರ ಚುನಾವಣೆಯಲ್ಲಿ ಅವರು ಡಿಎಂಕೆ ಪರ ಕೆಲಸ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ಟಿವಿಕೆಗೆ ಸೇರಿದ್ದರು. ಸ್ಯಾಂಟಿಯಾಗೊ ಅವರ ಪುತ್ರ ಜೋಶ್ ಚಾರ್ಲ್ಸ್ 2015ರಲ್ಲಿ ಬಿಜೆಪಿಗೆ ಸೇರಿದ್ಜು, ಹಿರಿಯ ನಾಯಕರ ಜೊತೆ ನಿಕಟ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಈ ಬೆಳವಣಿಗೆಗಳು ಮತ್ತಷ್ಟು ಅನುಮಾನಗಳಿಗೂ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.