ADVERTISEMENT

ಬಣಗಳಾಗಿ ವಿಭಜನೆಯಾಗುವುದೇ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ?

ಪಿಟಿಐ
Published 21 ಸೆಪ್ಟೆಂಬರ್ 2020, 7:02 IST
Last Updated 21 ಸೆಪ್ಟೆಂಬರ್ 2020, 7:02 IST
ಸಚಿವ ಪನ್ನೀರ್‌ಸೆಲ್ವಂ ಮತ್ತು ಮುಖ್ಯಮಂತ್ರಿ ಪಳನಿಸ್ವಾಮಿ
ಸಚಿವ ಪನ್ನೀರ್‌ಸೆಲ್ವಂ ಮತ್ತು ಮುಖ್ಯಮಂತ್ರಿ ಪಳನಿಸ್ವಾಮಿ    

ಚೆನ್ನೈ: ಪಕ್ಷದೊಳಗಿನ ಭಿನ್ನಾಭಿಪ್ರಾಯಗಳೂ ಸೇರಿದಂತೆ ಹಲವು ಸಮಸ್ಯೆಗಳಿಂದ ಕೂಡಿರುವ ಆಡಳಿತಾರೂಢ ಎಐಎಡಿಎಂಕೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ವಿಭಜನೆಯಾಗುವ ಸಾಧ್ಯತೆಯಿದೆ ಎಂದು ಡಿಎಂಕೆ ಪ್ರಚಾರ ಕಾರ್ಯದರ್ಶಿ ತಂಗ ತಮಿಳ್‌ಸೆಲ್ವನ್ ಭಾನುವಾರ ಹೇಳಿದ್ದಾರೆ.

‘ಮುಂಬರುವ ವಾರಗಳಲ್ಲಿ ವಿಭಜನೆಯ ಸ್ಪಷ್ಟ ಚಿತ್ರಣವು ಗೋಚರಿಸಲಿದೆ. ಅಲ್ಲದೆ, ಚುನಾವಣೆ ಸಮೀಪಿಸುತ್ತಿದ್ದಂತೆ ವಿಭಜನೆಯನ್ನು ರಾಜ್ಯ ನೋಡಲಿದೆ,’ ಎಂದು ಅವರು ಹೇಳಿದ್ದಾರೆ.

‘ಎಐಎಡಿಎಂಕೆಯಲ್ಲಿ ಹಲವಾರು ಸಮಸ್ಯೆಗಳಿವೆ. ಆ ಪಕ್ಷದ ನಾಲ್ಕು ಗೋಡೆಗಳೊಳಗಿನ ಮೌಖಿಕ ವಾಗ್ವಾದಗಳು ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸಾಕಷ್ಟು ಸೂಚನೆಗಳನ್ನು ನೀಡುತ್ತಿವೆ. ಅವರ ಮಧ್ಯೆ ಬೀದಿ ಜಗಳ ಆರಂಭವಾಗುತ್ತದೆ. ಚುನಾವಣೆಗೆ ಮುನ್ನ ಹಲವು ಬಣಗಳಾಗಿ ಎಐಎಡಿಎಂಕೆ ಒಡೆದು ಹೋಗಲಿದೆ,’ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ADVERTISEMENT

ತಮ್ಮ ವಾದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಎಐಎಎಡಿಎಂಕೆ ಸಭೆಯನ್ನು ತಮಿಳ್‌ ಸೆಲ್ವನ್‌ ಉಲ್ಲೇಖಿಸಿದರು. ಪಕ್ಷದ ಸಂಯೋಜಕ ಒ. ಪನ್ನೀರ್‌ಸೆಲ್ವಂ ಮತ್ತು ಸಹಸಂಯೋಜಕ ಕೆ. ಪಳನಿಸ್ವಾಮಿ ಅವರು ಸಭೆಯಲ್ಲಿ ಪಕ್ಷದ ಸಮಸ್ಯೆಗಳ ಕಡೆಗೆ ದೃಷ್ಟಿಯನ್ನೂ ಹಾಯಿಸಿರಲಿಲ್ಲ.

ಅದರೆ, ಕಂದಾಯ ಸಚಿವ ಆರ್ ಬಿ ಉದಯಕುಮಾರ್ ಅವರು ಈ ವಾದವನ್ನು ನಿರಾಕರಿಸಿದ್ದಾರೆ. ಇಬ್ಬರೂ ನಾಯಕರ ನಡುವೆ ಅತ್ಯುತ್ತಮ ಹೊಂದಾಣಿಕೆ ಇದೆ. ಅವರು ರಾಮ ಲಕ್ಷ್ಮಣರಂತೆ ಇದ್ದಾರೆ ಎಂದು ತಿಳಿಸಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ 2021 ರ ಏಪ್ರಿಲ್-ಮೇ ವೇಳೆಗೆ ನಡೆಯುವ ಸಾಧ್ಯತೆಗಳಿವೆ‌.

ಜಯಲಲಿತಾ ಅವರ ನಿಧನದ ನಂತರ ಎಐಎಡಿಎಂ ಬಣಗಳಾಗಿ ಒಡೆದು ಹೋಗಿತ್ತು. ಆದರೆ. 2017ರಲ್ಲಿ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ನೇತೃತ್ವದ ಬಣಗಳು ಒಗ್ಗೂಡಿದವು. ತಂಗ ತಮಿಳು ಸೆಲ್ವನ್ ಕಳೆದ ವರ್ಷ ಡಿಎಂಕೆ ಸೇರುವ ಮೊದಲು ಟಿಟಿವಿ ದಿನಕರನ್ ನೇತೃತ್ವದ ಅಮ್ಮ ಮಕ್ಕಳ್‌ ಮುನ್ನೇಟ್ರಾ ಕಳಗಂನಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.