ADVERTISEMENT

ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ: ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಖರ್ಗೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 10:08 IST
Last Updated 14 ಅಕ್ಟೋಬರ್ 2022, 10:08 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ‘ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನೊಬ್ಬನ ಕೈಯಿಂದ ಎಲ್ಲವೂ ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಕೆಪಿಸಿಸಿ ಅಧ್ಯಕ್ಷನಾಗಿದ್ದ ವೇಳೆಯೂ ಇದನ್ನೇ ಹೇಳಿದ್ದೆ. ಕೆಲವರು ನಾನು ಅಂತ ಹೇಳುತ್ತಾರೆ. ಅದರ ಬದಲು ನಾವುಎಂದರೆ ಪಕ್ಷಕ್ಕೆ ಒಳ್ಳೆಯದು’ ಎಂದರು.

‘ನಾನು ಅಪೇಕ್ಷೆ ಪಟ್ಟು ನಿಂತಿರುವ ಚುನಾವಣೆ ಅಲ್ಲ. ನಮ್ಮ ನಾಯಕರು ಒತ್ತಾಯ ಮಾಡಿದ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದೇನೆ.ಇದು ವೈಯಕ್ತಿಕ ಹೋರಾಟ ಅಲ್ಲ. ರಾಜಸ್ಥಾನದಉದಯಪುರದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಜಾರಿ ಮಾಡುವುದಕ್ಕೆ ಮೊದಲ ಆದ್ಯತೆ ನೀಡುತ್ತೇನೆ’ ಎಂದರು.

ADVERTISEMENT

ಅಭ್ಯರ್ಥಿಯಾಗಿ ಹತ್ತು ರಾಜ್ಯಗಳಲ್ಲಿ ಪ್ರವಾಸ ಮಾಡಿ ಮತ ಕೇಳಿದ್ದೇನೆ. ಇನ್ನು ಒಂದಷ್ಟು ರಾಜ್ಯಗಳು ಬಾಕಿ ಇವೆ. ರಾಜ್ಯದ ಹಲವು ನಾಯಕರಿಗೆ ಕರೆ ಮಾಡಿ ಮಾತನಾಡಿದ್ದೇನೆ ಎಂದರು.

‘ಕಾಂಗ್ರೆಸ್‌ ಪಕ್ಷಕ್ಕಾಗಿ ಗಾಂಧಿ ಪರಿವಾರ ತ್ಯಾಗ ಮಾಡಿದೆ. ಸೋನಿಯಾ ಗಾಂಧಿ ಕೂಡಾ ಸಾಕಷ್ಟು ಹೋರಾಟ ಮಾಡಿದ್ದಾರೆ.ಬಿಜೆಪಿಯು ನಮ್ಮ ಸರ್ಕಾರಗಳನ್ನು ಉರುಳಿಸುವ ಪ್ರಯತ್ನ ಮಾಡಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಗಾಂಧಿ ಕುಟುಂಬದ ಸಲಹೆ, ಮಾರ್ಗದರ್ಶನ ಪಡೆಯುತ್ತೇನೆ. ಇದರಲ್ಲಿ ನಾಚಿಕೆ ಪಡುವಂತಹುದು ಏನಿದೆ. ತಪ್ಪುಗಳಿದ್ದರೆ ತಿದ್ದಿಕೊಳ್ಳುತ್ತೇನೆ’ ಎಂದರು.

‘ಗಾಂಧಿ ಪರಿವಾರ ಬಿಟ್ಟು ರಾಜಕೀಯ ಮಾಡಲು ಸಾಧ್ಯವಿಲ್ಲ.ಗಾಂಧಿ ಕುಟುಂಬ ಪವರ್ ಸೆಂಟರ್ ಅಲ್ಲ, ಅವರ ಅನುಭವವನ್ನು ಪಡೆಯುವುದರಲ್ಲಿ ತಪ್ಪಿಲ್ಲ’ ಎಂದು ಅವರು ಹೇಳಿದರು.

‘ನಾನು ಐವತ್ತು ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿದ್ದೇನೆ. ನಾಯಕರು ಬಂದು ಭೇಟಿ ಮಾಡಿ ಬೆಂಬಲ ನೀಡಿದ್ದಾರೆ. ಅಧ್ಯಕ್ಷ ಸ್ಥಾನದ ಅಭ್ಯರ್ಥಿಶಶಿ ತರೂರ್ ಕಡೆಗೆ ಹೋಗಬೇಡಿ, ಅವರಿಗೆ ಮತ ನೀಡಬೇಡಿ ಎಂದು ನಾನು ಹೇಳಿಲ್ಲ. ಅವರಿಗೆ ಶಕ್ತಿ ಇದ್ದರೆ ನಾಯಕರನ್ನು ಕರೆಸಿಕೊಳ್ಳಲಿ, ನನ್ನ ತಕರಾರು ಇಲ್ಲ’ ಎಂದರು.

‘ಪಕ್ಷದಜಿ 23 ನಾಯಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ.ನಮ್ಮದು ಪ್ರಧಾನಿ ನರೇಂದ್ರ ಮೋದಿ–ಗೃಹ ಸಚಿವ ಅಮಿತ್‌ ಶಾ ತತ್ವದ ವಿರುದ್ಧ ಹೋರಾಟ.ಶಾಸಕರ ಖರೀದಿ, ಹಿಂಬಾಗಿಲ‌ ಮೂಲಕ ಸರ್ಕಾರ ರಚನೆಯ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.