ADVERTISEMENT

ನರೇಗಾದಲ್ಲಿ ಭಾರಿ ಭ್ರಷ್ಟಾಚಾರ ಎಂದ ಸಚಿವ ಜೋಶಿ ಹೇಳಿಕೆಗೆ AICC ಆನಂದ ಕುಮಾರ ಕಿಡಿ

ಮನ್ರೇಗಾದಲ್ಲಿ ಕಾಂಗ್ರೆಸ್‌ ನಿಂದ ಭ್ರಷ್ಟಾಚಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಬಾಲಿಶ ಹೇಳಿಕೆ - ಎಐಸಿಸಿ ರಾಷ್ಟ್ರೀಯ ಸಂಯೋಜಕ ಆನಂದ ಕುಮಾರ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 18:22 IST
Last Updated 8 ಜನವರಿ 2026, 18:22 IST
<div class="paragraphs"><p>ಆನಂದ ಕುಮಾರ</p></div>

ಆನಂದ ಕುಮಾರ

   

ನವದೆಹಲಿ; ಜಗತ್ತಿನ ಅತಿ ದೊಡ್ಡ, ಲೆಕ್ಕವಿಲ್ಲದಷ್ಟು ಜನರ ಬದುಕು ಹಸನು ಮಾಡಿದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಂಗ್ರೆಸ್ ಅವಧಿಯಲ್ಲಿ ₹11 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಆಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಎಐಸಿಸಿ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಆನಂದ ಕುಮಾರ್ ಹೇಳಿದ್ದಾರೆ.

ಮನ್ರೇಗಾದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಪ್ರಹ್ಲಾದ್‌ ಜೋಶಿ ಅವರು, ದಾಖಲೆಗಳನ್ನು ಬಿಡುಗಡೆ ಮಾಡದೇ ಗಾಳಿಯಲ್ಲಿ ಗುಂಡು ಹಾರಿಸುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಮನರೇಗಾ ಕಾಯ್ದೆ ವಿ‍ಶ್ವದಲ್ಲೇ ಅತ್ಯಂತ ದೊಡ್ಡದು. ಇದಕ್ಕೆ ಜಾಗತಿಕ ಮಾನ್ಯತೆ ದೊರೆತಿದೆ. ಆದರೆ ʼವಿಬಿಜಿ ರಾಮ್ ಜಿ ಕಾಯ್ದೆʼಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕಾಂಗ್ರೆಸ್‌ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿರುವುದು ಸರಿಯಲ್ಲ. ದೇಶದ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಮತ್ತು ಎನ್.ಡಿ.ಎ ಆಡಳಿತವಿದೆ. ಕೆಲವು ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಇದೆ. ಯಾವ ರಾಜ್ಯದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಹೇಳದೇ ಟೀಕೆ ಮಾಡುತ್ತಿರುವುದು ಕೇಂದ್ರ ಸಚಿವರಾದ ಇವರಿಗೆ ಶೋಭೆ ತರುವುದಿಲ್ಲ. ಇದು ನಿಜಕ್ಕೂ ಬಾಲಿಶ ವರ್ತನೆ ಎಂದು ಹೇಳಿದ್ದಾರೆ.

ADVERTISEMENT

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯುಪಿಎ ಕಾಲದ 10 ವರ್ಷದಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ಆಗಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಅದನ್ನು ಅಲ್ಲಗಳೆದಿಲ್ಲ ಎಂದು ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ. ಇಷ್ಟು ದೊಡ್ಡ ಭ್ರಷ್ಟಾಚಾರ ಆಗಿದ್ದರೆ ಯಾಕೆ ಸಿಬಿಐ ತನಿಖೆ ನಡೆದಿಲ್ಲ. ಮನರೇಗಾ ಯೋಜನೆಯ ಮಹತ್ವ ಎಲ್ಲರಿಗೂ ತಿಳಿದಿದೆ. ಬಿಜೆಪಿಯವರಿಗೆ ಗಾಂಧೀಜಿ ಬಗ್ಗೆ ಒಲವಿಲ್ಲ. ಇಡೀ ಜಗತ್ತಿಗೆ ಗಾಂಧೀಜಿ ಹತ್ತಿರವಾಗುತ್ತಿದ್ದಾರೆ. ಆದರೆ ಬಿಜೆಪಿಯವರಿಂದ ಮಾತ್ರ ಗಾಂಧೀಜಿ ದೂರ ಸರಿಯುತ್ತಿದ್ದಾರೆ. ಇದಕ್ಕೆ ದೊಡ್ಡ ನಿದರ್ಶನವೆಂದರೆ ಈ ಯೋಜನೆಯಿಂದ ಗಾಂಧೀಜಿ ಹೆಸರು ತೆಗೆದಿರುವುದು ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಕಾಲದಲ್ಲಿ ಮನರೇಗಾದಲ್ಲಿ ಡಿಜಿಟಲ್ ಪೇಮೆಂಟ್ ಮಾಡುತ್ತಿಲ್ಲ ಎಂದು ಜೋಶಿ ಆರೋಪಿಸಿದ್ದಾರೆ. ಆದರೆ ನೇರ ಸೌಲಭ್ಯ ವರ್ಗಾವಣೆ ಯೋಜನೆ ಜಾರಿಗೆ ತಂದಿದ್ದೇ ಕಾಂಗ್ರೆಸ್ ಕಾರ್ಯಕ್ರಮವನ್ನು ಇವರು ನಮ್ಮದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯಕ್ಕೆ ಹತ್ತು ವರ್ಷಗಳಲ್ಲಿ 8.53 ಲಕ್ಷ ಕೋಟಿ ರೂ ಕೊಟ್ಟಿದ್ದು, ಸಿದ್ದರಾಮಯ್ಯ ಅವರ ಕಾಲದಲ್ಲೇ ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗಿದೆ ಎಂದು ಹೇಳಿದ್ದಾರೆ. ಯಾಕೆ ಒಬ್ಬೇ ಬಿಜೆಪಿ ನಾಯಕರು ರಾಜ್ಯದಲ್ಲಿ ಈ ಬಗ್ಗೆ ಚಕಾರ ಎತ್ತಿಲ್ಲ. ಇತ್ತೀಚೆಗೆ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲೂ ಈ ವಿಚಾರದ ಬಗ್ಗೆ ಚರ್ಚೆ ನಡೆಸಿಲ್ಲ. 11 ಲಕ್ಷ ಕೋಟಿ ರೂ ಮೊತ್ತದ ಭ್ರಷ್ಟಾಚಾರ ತಡೆಯಲು ಕೇಂದ್ರದ ಎನ್.ಡಿ.ಎ ಸರ್ಕಾರ ವಿಫಲವಾಗಿದೆ. ಐಟಿ, ಇಡಿ ಬಿಜೆಪಿಯವರ ಪದತಲದಲ್ಲಿದೆ. ಮನ್ರೇಗಾದ ಭ್ರಷ್ಟರಿಗೆ ಯಾಕೆ ಹೆಡೆ ಮುರಿಕಟ್ಟಿಲ್ಲ ಎಂದು ಎಂದು ಡಾ. ಆನಂದ ಕುಮಾರ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಮನ್ರೇಗಾ ಯೋಜನೆಯಡಿ ಕೆಲಸ ಮಾಡಿದ ಎಲ್ಲರಿಗೂ ಹಣ ಪಾವತಿಸಲಾಗಿದೆ. ಆದರೆ ಪ್ರಹ್ಲಾದ್ ಜೋಶಿ ಅವರು ಮಾಡಿರುವ ಆರೋಪ ಆಧಾರ ರಹಿತ. ಮನ್ರೇಗಾ 20 ವರ್ಷಗಳಿಂದ ಒಂದು ಹಕ್ಕಿನ ಆಧಾರಿತ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾಗಿತ್ತು. ಗ್ರಾಮೀಣ ಕುಟುಂಬಗಳಿಗೆ ಕನಿಷ್ಠ ಉದ್ಯೋಗದ ಹಕ್ಕನ್ನು ಸಂಬಳ ಸಹಿತವಾಗಿ ನೀಡುತ್ತಿತ್ತು. ಕೆಲಸದ ಹಕ್ಕಿನ ಕಲ್ಪನೆ ಪ್ರಮಾಣಿತ ಕೇಂದ್ರಿತ ಯೋಜನೆಯಾಗಿ ಬದಲಾಗಿದೆ. ನರೇಂದ್ರ ಮೋದಿ ಅವರು ಅಧಿಕಾರದ ಚುಕ್ಕಾಣಿ ಹಿಡಿದಾಗ ಮನ್ರೇಗಾ ಯೋಜನೆಯನ್ನು ಕಾಂಗ್ರೆಸ್ ಪಳೆಯುಳಿಕೆಯ ಕಾರ್ಯಕ್ರಮ ಎಂದು ಹೇಳಿದ್ದರು. ಆದರೆ 11 ವರ್ಷಗಳ ಕಾಲ ಈ ಯೋಜನೆಯ ಬುಡ ಅಲ್ಲಾಡಿಸಲು ಇವರಿಂದ ಆಗಿರಲಿಲ್ಲ. ಇದೊಂದು ವಿವೇಕ ಶೂನ್ಯ ನಡೆಯಾಗಿದ್ದು, ಇದರ ವಿರುದ್ಧ ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳು ಮನ್ರೇಗಾ ಬಚಾವೋ ಸಂಗ್ರಾಮ್ ಆರಂಭಿಸುತ್ತಿದೆ. ಈ ಹೋರಾಟದಲ್ಲಿ ದಲಿತರು, ಶೋಷಿತರು ಪಾಲ್ಗೊಳ್ಳಬೇಕು ಎಂದು ಹೇಳಿದ್ದಾರೆ.

ಉದ್ಯೋಗವನ್ನು ಮೂಲಭೂತ ಹಕ್ಕಾಗಿ ಪರಿವರ್ತಿಸಿದ್ದು ಕಾಂಗ್ರೆಸ್‌ ಆಡಳಿತ. ಆದರೆ ಕೇಂದ್ರ ಸರ್ಕಾರ ಮನ್ರೇಗಾದಲ್ಲಿ ಕೇಂದ್ರ ಸರ್ಕಾರ ಶೇ 90 ರಷ್ಟು ಕೊಡುಗೆ ನೀಡುತ್ತಿತ್ತು. ಆದರೆ ʼವಿಬಿಜಿ ರಾಮ್ ಜಿ ಕಾಯ್ದೆʼಯಡಿ ರಾಜ್ಯಗಳಿಗೆ ಶೇ 40 ರಷ್ಟು ಹೊರೆ ಹೇರಿದೆ. ಸಾಲದ ಸುಳಿಯಲ್ಲಿರುವ ಮೋದಿ ಸರ್ಕಾರ ಇದೀಗ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ತಿಲಾಂಜಲಿ ಇಟ್ಟು ರಾಜ್ಯಗಳನ್ನು ಸಾಲದ ಪಾಶಕ್ಕೆ ಸಿಲುಕಿಸಲು ಷಡ್ಯಂತ್ರ ರೂಪಿಸಿದ್ದಾರೆ. ಕೇಂದ್ರದ ತೀರ್ಮಾನದಿಂದ ಸಣ್ಣ ರಾಜ್ಯಗಳಿಗೆ ರಾಜ್ಯಗಳು ತತ್ತರಿಸಲಿವೆ. ಒಕ್ಕೂಟ ವ್ಯವಸ್ಥೆಗೆ ಅರ್ಥವೇ ಇಲ್ಲದಂತೆ ಆಗಲಿದೆ ಎಂದು ಡಾ. ಆನಂದ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.