ADVERTISEMENT

ಮಹಾರಾಷ್ಟ್ರ: ರಾಜ್ಯಸಭೆ ಚುನಾವಣೆಯಲ್ಲಿ ಎಐಎಂಐಎಂ ಶಾಸಕರಿಂದ ಕಾಂಗ್ರೆಸ್‌ಗೆ ಮತ

ಪಿಟಿಐ
Published 10 ಜೂನ್ 2022, 5:03 IST
Last Updated 10 ಜೂನ್ 2022, 5:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ:ರಾಜ್ಯಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುವುದಾಗಿ ಎಐಎಂಐಎಂ ಘೋಷಿಸಿದೆ.

ಈ ಕುರಿತು, ಮತದಾನ ಆರಂಭಕ್ಕೆ ಕೆಲವೇ ಗಂಟೆಗಳ ಮುನ್ನ ಪಕ್ಷದ ಔರಂಗಾಬಾದ್ ಸಂಸದ ಇಮ್ತಿಯಾಜ್ ಜಲೀಲ್ ಟ್ವೀಟ್ ಮೂಲಕ ಘೋಷಣೆ ಮಾಡಿದ್ದಾರೆ.

‘ಕಾಂಗ್ರೆಸ್ ಅಭ್ಯರ್ಥಿ ಶಾಯರ್ ಇಮ್ರಾನ್ ಅವರಿಗೆ ಮತ ನೀಡುವಂತೆ ನಮ್ಮ ಇಬ್ಬರು ಶಾಸಕರಿಗೆ ಸೂಚಿಸಲಾಗಿದೆ. ಅವರಿಗೆ ನಮ್ಮ ಶುಭಾಶಯಗಳು. ಬಿಜೆಪಿಯನ್ನು ಸೋಲಿಸುವುದಕ್ಕಾಗಿ ನಮ್ಮ ಪಕ್ಷವು ರಾಜ್ಯಸಭೆ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಅಭ್ಯರ್ಥಿಗೆ ಮತ ನೀಡಲು ನಿರ್ಧರಿಸಿದೆ. ಆದಾಗ್ಯೂ, ಮೈತ್ರಿಕೂಟದ ಸದಸ್ಯ ಪಕ್ಷವಾಗಿರುವ ಶಿವ ಸೇನಾ ಜತೆಗಿನ ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳು ಮುಂದುವರಿಯಲಿವೆ’ ಎಂದು ಇಮ್ತಿಯಾಜ್ ಜಲೀಲ್ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಧುಲಿಯಾ ಮತ್ತು ಮಾಲೆಗಾಂವ್‌ನಲ್ಲಿ ನಮ್ಮ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾವು ಕೆಲವು ಷರತ್ತುಗಳನ್ನು ಹಾಕಿದ್ದೇವೆ. ಎಂಪಿಎಸ್‌ಸಿಯಲ್ಲಿ ಅಲ್ಪಸಂಖ್ಯಾತ ಸದಸ್ಯರನ್ನು ನೇಮಿಸಬೇಕು, ಮಹಾರಾಷ್ಟ್ರ ವಕ್ಫ್ ಮಂಡಳಿಯ ಆದಾಯವನ್ನು ಹೆಚ್ಚಿಸಲು ಕ್ರಮಕೈಗೊಳ್ಳಬೇಕು ಮತ್ತು ಮುಸ್ಲಿಮರಿಗೆ ಮೀಸಲಾತಿ ಒದಗಿಸಿಕೊಡಬೇಕು ಎಂಬುದಾಗಿ ಆಗ್ರಹಿಸಿದ್ದೇವೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.