ಸಂವಿಧಾನ
ಜಲ್ನಾ: ಸಂವಿಧಾನದ ಪ್ರಸ್ತಾವನೆಯಲ್ಲಿನ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ಕೈಬಿಡಬೇಕು ಎಂಬ ಆರ್‌ಎಸ್‌ಎಸ್‌ನ ಬೇಡಿಕೆಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ (ಎಐಎಂಪಿಎಲ್‌ಬಿ) ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಭಾನುವಾರ ವಿರೋಧ ವ್ಯಕ್ತಪಡಿಸಿದರು.
ಇತ್ತೀಚೆಗೆ ಈ ಕುರಿತು ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ‘ಈ ಪದಗಳು ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಭಾಗವಾಗಿರಲಿಲ್ಲ, ಬದಲಿಗೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸೇರಿಸಲಾಗಿತ್ತು. ಹೀಗಾಗಿ ಅದನ್ನು ಪರಿಷ್ಕರಿಸಬೇಕಿದೆ’ ಎಂದು ಆಗ್ರಹಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಖಾಲಿದ್ ಅವರು, ‘ಈ ಎರಡು ಪದಗಳು ಸಂವಿಧಾನದ ಬಹುಮುಖ್ಯವಾದ ಸತ್ವವಾಗಿವೆ. ಅವು ದೇಶದ ನಾಗರಿಕರಿಗೆ ಜಾತಿ ಮತ್ತು ಧರ್ಮದ ಭೇದ ಮಾಡದೇ ಸಮಾನ ಹಕ್ಕುಗಳನ್ನು ಒದಗಿಸುತ್ತದೆ. ಇಂದಿರಾಗಾಂಧಿ ಅವರು ಪ್ರಧಾನಿ ಆಗಿದ್ದಾಗ ಇವನ್ನು ಸರ್ವಾನುಮತದಿಂದ ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ’ ಎಂದು ಅವರು ಹೇಳಿದರು.
ಇದೇ ವೇಳೆ ಅವರು, ಉತ್ತರಾಖಂಡದ ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿರುದ್ಧ ವಾಗ್ದಾಳಿ ನಡೆಸಿದರು. ‘ಇದು ಮುಸ್ಲಿಮರ ವಿಶಿಷ್ಟ ಗುರುತನ್ನು ಅಳಿಸುವ ಯತ್ನವಾಗಿದೆ’ ಎಂದು ಅವರು ಕಿಡಿಕಾರಿದರು.
‘ಭಾರತದಲ್ಲಿರುವ ಪ್ರತಿ ಧರ್ಮವೂ ತನ್ನದೇ ಆದ ವೈಯಕ್ತಿಕ ಕಾನೂನು ಹೊಂದಿದೆ. ಯುಸಿಸಿಯು ಕೇವಲ ಮುಸ್ಲಿಮರಿಗಷ್ಟೇ ಅಲ್ಲದೆ, ಇತರ ಸಮುದಾಯಗಳ ಧಾರ್ಮಿಕ ಸ್ವಾಯತ್ತೆಗೂ ಬೆದರಿಕೆಯೊಡ್ಡಿದೆ’ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳ ರಕ್ಷಿಸಲು ಯುಸಿಸಿ ವಿರುದ್ಧ ಸಾರ್ವಜನಿಕವಾಗಿ ಮತ್ತು ಕಾನೂನಾತ್ಮಕವಾಗಿ ಎಐಎಂಪಿಎಲ್‌ಬಿ ಹೋರಾಟ ನಡೆಸಲಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.